206 ರೈತರ ವಿಮಾ ಹಣ ಮಂಜೂರು ಮಾಡಿ: ಸಂದೀಪ ಪಾಟೀಲ

ಬೀದರ: ಎ.21:ಜಿಲ್ಲೆಯ ಔರಾದ ತಾಲೂಕಿನ ಹಂಗರಗಾ ಗ್ರಾಮದ ಸುಮಾರು 206 ರೈತರು ವಿಮೆ ತುಂಬಿದರೂ ಇಲ್ಲಿಯವರೆಗೆ ಕೃಷಿ ಅಧಿಕಾರಿಗಳು ಯಾವುದೇ ಗಮನ ಹರಿಸದೆ ವಿಮಾ ಕಂಪನಿಯವರಿಂದ ರೈತರ ವಿಮೆ ಹಣ ಬಿಡುಗಡೆ ಮಾಡಿರುವುದಿಲ್ಲ. ಸರ್ಕಾರ ಕೂಡಾ ಇದಕ್ಕೆ ಆಲಸ್ಯ ತೋರುತ್ತಿದೆ. ಈಗಾಗಲೇ ರೈತರ ವಿಮೆ ಸಲುವಾಗಿ ಸರ್ವೆ ಕೂಡಾ ಆಗಿದೆ. ಆದರೆ ಎಲ್ಲಾ ಸರಿಯಾಗಿದ್ದರೂ ವಿಮಾ ಹಣ ಮಾತ್ರ ಬಿಡುಗಡೆ ಮಾಡುತ್ತಿಲ್ಲ. ಇದನ್ನು ಕಿಸಾನ್ ಸೇನಾ ಸಂಘ ಖಂಡಿಸುತ್ತದೆ ಎಂದು ಕಿಸಾನ ಸೇನಾ ಸಂಘದ ತಾಲೂಕಾ ಅಧ್ಯಕ್ಷರಾದ ಸಂದೀಪ ಪಾಟೀಲ ಹಂಗರಗಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಗರದ ಶಿವನಗರದಲ್ಲಿರುವ ಅರುಣೋದಯ ಎಂಟರ್‍ಟೇನ್‍ಮೆಂಟ್ ಪ್ರೈವೇಟ್ ಲಿಮಿಟೆಡ್ ಕಚೇರಿಯಲ್ಲಿ ಕಿಸಾನ್ ಸೇನಾ ಸಂಘದ ವತಿಯಿಂದ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

“ಕಿಸಾನ್ ಸೇನಾ ಸಂಘದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೂ, ಜಿಲ್ಲಾಧಿಕಾರಿಗಳಿಗೆ ಹಾಗೂ ಜಂಟಿ ನಿರ್ದೇಶಕರಿಗೆ, ಸಹಾಯಕ ನಿರ್ದೇಶಕರಿಗೆ 2019 ರಿಂದ 2020ರ ವರೆಗೆ ಸುಮಾರು ಏಳು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಯಾರೊಬ್ಬರೂ ರೈತರ ವಿಮೆ ಬಿಡುಗಡೆ ಮಾಡಿಸುವ ಕಡೆಗೆ ಗಮನ ಹರಿಸುತ್ತಿಲ್ಲ. 206 ರೈತರು ವಿಮಾ ಹಣವನ್ನು ಕಟ್ಟಿರುತ್ತಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಭೇಟಿ ಮಾಡಿರುತ್ತೇವೆ. ಎಲ್ಲಾ ದಾಖಲೆಗಳನ್ನು ನೀಡಿರುತ್ತೇವೆ. ಜಿಲ್ಲಾ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸಂಬಂಧಪಟ್ಟ ವಿಮಾ ಕಂಪನಿಯವರು ಹಾಗೂ ರೈತರ ಸಭೆ ಕೂಡಾ ನಡೆಸಲಾಗಿತ್ತು. ಆ ಸಭೆಯಲ್ಲಿ ರೈತರ ವಿಮಾ ಹಣವನ್ನು ಒಂದು ತಿಂಗಳ ಒಳಗಾಗಿ ಸಂದಾಯ ಮಾಡುತ್ತೇವೆ ಎಂದು ಹೇಳಿ 6 ತಿಂಗಳು ಕಳೆದರೂ ಇಲ್ಲಿಯವರೆಗೆ ಯಾವುದೇ ವಿಮಾ ಹಣ ಸಂದಾಯ ಆಗಿರುವುದಿಲ್ಲ. ಯಾವುದೇ ರೀತಿಯ ಉತ್ತರ ನೀಡಿರುವುದಿಲ್ಲ. ಆದ್ದರಿಂದ ಅಧಿಕಾರಿಗಳು ಮತ್ತು ಸರ್ಕಾರ ಕೂಡಲೇ ರೈತರ ವಿಮೆ ಹಣ ಒಂದು ವಾರದ ಒಳಗಾಗಿ ನೀಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರೈತರ ಜಾನುವಾರಗಳ ಸಮೇತ ಧರಣಿ ಸತ್ಯಾಗ್ರಹ ಕುಳಿತುಕೊಳ್ಳಲಾಗುವುದು ಎಂದು ಸಂದೀಪ ಪಾಟೀಲ ಸುದ್ದಿಗಾರರಿಗೆ ತಿಳಿಸಿದರು.

ಸರ್ಕಾರ ಯಾವುದೋ ಅನರ್ಥ ಯೋಜನೆಗಳಿಗೆ ಹಣ ವ್ಯಯ ಮಾಡುತ್ತದೆ. ಆದರೆ ದೇಶದ ಬೆನ್ನೆಲುಬಾದ ರೈತರ ವಿಮೆ ಹಣಕ್ಕಾಗಿ ಮಾತ್ರ ಲೆಕ್ಕ ಹಾಕುತ್ತದೆ. ರೈತರು ಇದನ್ನು ಖಂಡಿಸುತ್ತಾರೆ ಎಂದು ತಿಳಿಸಿದರು. ಅಲ್ಲದೇ ವಿಮಾ ಹಣ ಬರುವವರೆಗೆ ನಿರಂತರ ಧರಣಿ ಸತ್ಯಾಗ್ರಹ ಮಾಡಲಾಗುವುದು. ಧರಣಿ ನಡೆಸುವಾಗ ರೈತರಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಅದಕ್ಕೆ ಸಂಬಂಧಪಟ್ಟ ಕೃಷಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಪಾಟೀಲ ತಿಳಿಸಿದರು.

ಸುನೀಲ ಗಬ್ರೆ, ಸುಧಾಕರ ಪಾಟೀಲ, ಭಾಗವತ ಪಾಟೀಲ, ಬಾಳಾಸಾಹೇಬ ಪಾಟೀಲ, ದಾವಿದ್ ಪಂಢರಿ, ದಶರಥ ಪಾಟೀಲ, ಗಣಪಯಿ ಪಾಠಟೀಲ, ಇಮೂಲ್ ಬೋರಾಳೆ, ಅಜೀತ ಪಾಟೀಲ, ಮಾಧವರಾವ್ ಢಗನಾರೆ ಹಾಗೂ ಮಲ್ಲಪ್ಪ ಮಜಕುರಿ ಸೇರಿದಂತೆ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.