2047 ರ ವೇಳೆಗೆ ಭಾರತವನ್ನು ವಿಶ್ವದ ದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಬೇಕು

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ. ಮಾ. 08:- 2047 ರ ವೇಳೆಗೆ ಭಾರತವನ್ನು ವಿಶ್ವದ ದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಲಾಷೆಯಾಗಿದೆ ಎಂದು ಬಿಜೆಪಿ ಪಕ್ಷದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಮೈ ವಿ ರವಿಶಂಕರ್ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ತಾಲೂಕು ಬಿಜೆಪಿ ನೂತನ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿಯು ಇಡೀ ವಿಶ್ವದಲ್ಲಿ ಒಂದು ದೊಡ್ಡ ಸಂಘಟನೆಯಾಗಿ ಬೆಳೆದಿದ್ದು ಪ್ರಧಾನಿಯಾಗಿ ನರೇಂದ್ರ ಮೋದಿ ಮಾಡಿರುವ ಸಾಧನೆಗಳು ನಮ್ಮೊಂದಿಗೆ ಇವೆ ಎಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿರುವ ಮತಕ್ಕಿಂತ ಕನಿಷ್ಠ ಶೇಕಡ ಹತ್ತರಷ್ಟು ಹೆಚ್ಚು ಮತಗಳು ಲಭಿಸುವಂತೆ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಪರಿಶ್ರಮದಿಂದ ದುಡಿಯಬೇಕೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ದಾ ಕರೆ ನೀಡಿದ್ದಾರೆ ಎಂದರು. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಇರುವ ಸಮಯದಲ್ಲಿ ನೂತನ ಅಧ್ಯಕ್ಷರಾಗಿ ಪದವಿ ಸ್ವೀಕರಿಸುತ್ತಿರುವುದು ಸವಾಲಿನ ಕೆಲಸವಾಗಿದ್ದು ಸಮತೋಲನವುಳ್ಳ ತಂಡವನ್ನು ಕಟ್ಟಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮೂಲಕ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. ಅಧ್ಯಕ್ಷ ಹುದ್ದೆ ಒಂದು ಜವಾಬ್ದಾರಿಯುತ ಹುದ್ದೆಯಾಗಿದ್ದು ಪ್ರತಿಯೊಬ್ಬ ಕಾರ್ಯಕರ್ತರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವವನ್ನು ರೂಡಿಸಿಕೊಳ್ಳಬೇಕಿದೆ ಎಂದರು. ಮಾಜಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನೂತನ ಅಧ್ಯಕ್ಷರಿಗೆ ಸಂಪೂರ್ಣ ಸಹಕಾರ ನೀಡಿದಲ್ಲಿ ಮಾತ್ರ ತಾಲೂಕಿನಲ್ಲಿ ಪಕ್ಷ ಸದೃಢಗೊಳ್ಳಲಿದೆ ಎಂದರು.
ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಹೆಚ್ಚು ಸಕ್ರಿಯರಾಗಬೇಕಿದ್ದು ಸಂಸದ ಪ್ರತಾಪ್ ಸಿಂಹ ಮಾಡಿರುವ ಅಭಿವೃದ್ಧಿ ಕೆಲಸಗಳ ಸಾಧನೆಗಳನ್ನು ಮನೆ ಮನೆಗೆ ಮಾಹಿತಿ ತಲುಪಿಸುವ ಕೆಲಸವಾಗಬೇಕಿದೆ ಎಂದರು. ನೂತನವಾಗಿ ಜಾರಿಗೆ ತಂದಿರುವ ಗ್ರಾಮ ಚಲೋ ಕಾರ್ಯಕ್ರಮ ಮತ್ತು ಫಲಾನುಭವಿಗಳ ಅಭಿಯಾನ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುವಂತೆ ಪಕ್ಷದ ಎಲ್ಲಾ ಪದಾಧಿಕಾರಿಗಳು ಪರಿಶ್ರಮಿಸಬೇಕಿದೆ ಎಂದರು.
ತಾಲೂಕು ಬಿಜೆಪಿ ನೂತನ ಮಂಡಲ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಾಜಿ ಜಿ ಪಂ ಸದಸ್ಯ ವಿ.ರಾಜೇಂದ್ರ ಮಾತನಾಡಿ ಪಕ್ಷ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವುದಾಗಿ ತಿಳಿಸಿದರು. ಕೇವಲ ಪ್ರಚಾರಕ್ಕೆ ಆದ್ಯತೆ ಕೊಡದೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸುವ ಕೆಲಸ ಮಾಡಬೇಕಿದ್ದು ಪಕ್ಷದ ನೂತನ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು, ಮಾಜಿ ಪದಾಧಿಕಾರಿಗಳು ಮತ್ತು ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರತಿಯೊಬ್ಬ ಕಾರ್ಯಕರ್ತರು ಒಗ್ಗಟ್ಟಿನಿಂದ ಸಹಕಾರ ನೀಡಬೇಕಿದೆ ಎಂದರು. ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ ರಿಪೆÇೀರ್ಟ್ ಕಾರ್ಡ್ ನೀಡಿದ್ದು ಅದನ್ನು ಸಂತೆ ಜಾತ್ರೆಗಳಲ್ಲಿ ಹಂಚದೇ ಗ್ರಾಮದ ಪ್ರತಿಯೊಂದು ಮನೆಮನೆಗೂ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಜಯರಾಮ್ ಗೌಡ, ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ.ಬಸವರಾಜ್, ತಂಬಾಕು ಮಂಡಳಿ ಮಾಜಿ ಸದಸ್ಯ ಪಿ.ವಿ.ಬಸವರಾಜಪ್ಪ, ನಿರ್ಗಮಿತ ಅಧ್ಯಕ್ಷ ಎಂ.ಎಂ.ರಾಜೇಗೌಡ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್, ಪಿ.ಪ್ರಶಾಂತ್ ಗೌಡ, ಆರ್.ಟಿ.ಸತೀಶ್ ಮಾತನಾಡಿದರು.
ಈ ಸಂದರ್ಭದಲ್ಲಿ ತಂಬಾಕು ಮಂಡಳಿ ಸದಸ್ಯ ಜಿ.ಸಿ.ವಿಕ್ರಂ ರಾಜ್, ಫಲಾನುಭವಿಗಳ ಸಂಪರ್ಕ ಅಭಿಯಾನದ ಜಿಲ್ಲಾ ಸಹ ಸಂಚಾಲಕಿ ಸವಿತಾ ಚೌಹಾಣ್, ಜಿಲ್ಲಾ ಉಪಾಧ್ಯಕ್ಷ ಕೆ.ಎನ್.ಸೋಮಶೇಖರ್, ಜಿಲ್ಲಾ ಸಹಕಾರ್ಯದರ್ಶಿಗಳಾದ ಪಿ.ಜೆ.ರವಿ, ಲೋಕೇಶ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಳಿನಿ ಗೌಡ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಚನ್ನಬಸವರಾಜು, ಹೆಮ್ಮಿಗೆ ರವಿ, ಮುಖಂಡರಾದ ಗೀತಾ ಗೌಡ, ಶುಭ ಗೌಡ, ಬೆಮ್ಮತ್ತಿ ಕೃಷ್ಣ, ಟಿ.ರಮೇಶ್, ಬೆಮ್ಮತ್ತಿ ಚಂದ್ರು, ಲೋಕಪಾಲಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.