2030 ಕ್ಕೆ ಭಾರತ ಹೆಚ್.ಐ.ವಿ ಮುಕ್ತ ದೇಶವಾಗಲಿದೆ

ಸಂಜೆವಾಣಿ ವಾರ್ತೆ
ಕೆ,ಆರ್.ಪೇಟೆ.ಮಾ.15: 2030 ಕ್ಕೆ ಭಾರತ ದೇಶ ಹೆಚ್.ಐ.ವಿ ಮುಕ್ತ ದೇಶವಾಗುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕರೆ ನೀಡಿದ್ದು ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಬಳ್ಳಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಮಹಾಲಕ್ಷ್ಮಿ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಬೂಕನಕೆರೆ ಹೋಬಳಿಯ ಮೋದೂರು ಗ್ರಾಮದಲ್ಲಿ ಎರಡನೇ ಹಂತದ ಸಮುದಾಯ ಆಧಾರಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಹೆಚ್.ಐ.ವಿ. ಸೋಂಕು ಧೃಢಪಟ್ಟ ಬಗ್ಗೆ ಪ್ರಾರಂಭಿಕ ಹಂತದಲ್ಲಿಯೇ ಪರೀಕ್ಷೆಗೆ ಒಳಗಾಗಿ ಚಿಕಿತ್ಸೆ ಪಡೆದರೆ ಕಾಯಿಲೆಯನ್ನು ಗುಣಪಡಿಸಬಹುದು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೌಲಭ್ಯವಿದೆ ಎಂದರು.
ಕಾರ್ಯಕ್ರಮದ ಕುರಿತು ಆಪ್ತ ಸಮಾಲೋಚಕ ಸತೀಶ್ ಮಾತನಾಡಿ ಮನೆಬಾಗಿಲಿಗೆ ಸೇವೆಯನ್ನು ನೀಡುತ್ತಿದ್ದು ಗ್ರಾಮಸ್ಥರು ಸದುಪಯೋಗಪಡಿಸಿಕೊಂಡು ತಮ್ಮಲ್ಲಿರುವ ಕೀಳರಮೆಯನ್ನು ಬಿಟ್ಟು ಪ್ರತಿಯೊಬ್ಬರೂ ಸಹ ಎಚ್ಚೆತ್ತು ತಪಾಸಣೆಯನ್ನು ಮಾಡಿಸಿಕೊಂಡು ತಮ್ಮ ಸ್ಥಿತಿಗಳನ್ನು ತಿಳಿದುಕೊಳ್ಳಬೇಕೆಂದು ಕರೆ ನೀಡಿದರು ಹಾಗೆಯೇ ಎರಡು ಸಾವಿರದ ಮೂವತ್ತಕ್ಕೆ ಹೆಚ್.ಐ.ವಿ ಮುಕ್ತ ಭಾರತ ನಿರ್ಮಾಣ ಮಾಡಲು ತಮ್ಮೆಲ್ಲರ ಸಹಕಾರ ಅಗತ್ಯವೆಂದು ಕೇಳಿಕೊಂಡರು.ಇದೇ ಸಂದರ್ಭದಲ್ಲಿ ತಪಾಸಣೆ ಜೊತೆಗೆ ಮಧುಮೇಹ ರಕ್ತದ ಒತ್ತಡ ಪರೀಕ್ಷೆಯನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಐಸಿಟಿಸಿ ವಿಭಾಗದ ಪ್ರಯೋಗಶಾಲ ತಂತ್ರಜ್ಞ ರಾಧಾ, ಡಿ.ಎನ್.ಗೀತಾ ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳಾದ ರಾಧ, ಪರೀಕ್ಷಾ ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜು, ರಮೇಶ್, ಶಾಲೆಯ ಮುಖ್ಯ ಶಿಕ್ಷಕ ಕೃಷ್ಣ, ಆಶಾ ಕಾರ್ಯಕರ್ತರು ಸಂಸ್ಥೆಯ ಸಂಪರ್ಕ ಕಾರ್ಯಕರ್ತರಾದ ಭವ್ಯ, ಪ್ರೇಮಲತಾ, ಚಂದನ ಮತ್ತು ತೇಜಾವತಿ ಪರಮೇಶ ಹಾಜರಿದ್ದರು.