2025 ರ ವೇಳೆಗೆ 200 ಸರಕಾರಿ ವೈದ್ಯಕೀಯ ಕಾಲೇಜುಗಳು

ಕಲಬುರಗಿ,ಸೆ.14: ಭಾರತದಲ್ಲಿ 2025 ರ ವೇಳೆಗೆ 200 ಸರಕಾರಿ ವೈದ್ಯಕೀಯ ಕಾಲೇಜುಗಳು ಪ್ರಾರಂಭಿಸುವ ಪ್ರಸ್ತಾಪವಿರುವುದರಿಂದ ನೀಟ್ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ ಸಿಗಲಿದೆ ಎಂದು ನೀಟ್ ಪರೀಕ್ಷಾ ತರಬೇತುದಾರರು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಜೆಡ್.ಎನ್. ಜಾಗೀರದಾರ ಹೇಳಿದರು.
ಕಲಬುರಗಿ ಆಕಾಶವಾಣಿಯ ‘ಜೊತೆ-ಜೊತೆಯಲಿ’ ನೇರಫೋನ್ ಇನ್ ಸಂವಾದದಲ್ಲಿ ಸೆ.14ರಂದು ‘ನೀಟ್ ಪರೀಕ್ಷೆಗೆ ಸುಲಭೋಪಾಯ’ ಕುರಿತಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಬಾರಿ 140 ಸರಕಾರಿ ವೈದ್ಯಕೀಯ ಕಾಲೇಜುಗಳ 90 ಸಾವಿರ ಸೀಟುಗಳಿಗಾಗಿ 18 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 8 ಲಕ್ಷ ಪುರುಷ ವಿದ್ಯಾರ್ಥಿಗಳು ಮತ್ತು 10 ಲಕ್ಷ ವಿದ್ಯಾರ್ಥಿನಿಯರು ನೀಟ್ ಪರೀಕ್ಷೆಗೆ ಹಾಜರಾಗಿದ್ದಾರೆ. 2025 ರ ವೇಳೆಗೆ ಇನ್ನಷ್ಟು ಹೆಚ್ಚುವರಿ ಸರಕಾರಿ ವೈದ್ಯಕೀಯ ಕಾಲೇಜುಗಳು ಪ್ರಾರಂಭವಾಗಲಿವೆ. ಬಹುತೇಕ ಎಲ್ಲ ಜಿಲ್ಲೆಗೊಂದರಂತೆ ಒಟ್ಟು 200 ಸರಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವ ಪ್ರಸ್ತಾವನೆಯಿದ್ದು ನೀಟ್ ವಿದ್ಯಾರ್ಥಿಗಳಿಗೆ ಹೇರಳವಾದ ಅವಕಾಶವಿದೆ ಎಂದರು. ಕರ್ನಾಟಕದಲ್ಲಿ ಸರಕಾರಿ ಹಂತದ 21 ಹಾಗೂ ಎರಡು ಇಎಸ್‍ಐ ವೈದ್ಯಕೀಯ ಆಸ್ಪತ್ರೆಗಳಿವೆ. ನೀಟ್ ವಿದ್ಯಾರ್ಥಿಗಳು ಎನ್‍ಸಿಇಆರ್‍ಟಿ ಪುಸ್ತಕವನ್ನು 2-3 ಬಾರಿ ಓದಬೇಕು ಪುಸ್ತಕದ ಪಟ್ಟಿ ಸಮಯ ನಿರ್ವಹಣೆ, ವೇಳಾಪಟ್ಟಿ ಸಿದ್ದಪಡಿಸಿ, ಮೊಬೈಲ್‍ನಿಂದ ದೂರವಿದ್ದು, ಪಾಲಕರು ಒತ್ತಡ ಹಾಕದೆ ಆತ್ಮವಿಶ್ವಾಸ ತುಂಬಿದರೆ ಮಾತ್ರ ನೀಟ್ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು ಎಂದು ಸಲಹೆ ನೀಡಿದರು.
ಕಲಬುರಗಿಯ ರಾಕೇಶ್ ಕಾಶೀನಾಥ ಕಲಾಲ್ ಯರಗೋಳ್ (650), ಮನೋಜ್ ಎನ್ ಬೆಂಗಳೂರು (690), ಶಹಾಪುರದ ರೇಶ್ಮಿಕಾ ವೆಂಕಟರಾವ್ (565), ಭರತ್ ಎಂ. ಯು, ತುಮಕೂರು (657), ಬೀದರ್‍ನ ಪುನೀತ್ ಬಿರಾದಾರ್ (660), ಸುರಪುರ ಕೋಡೆಕಲ್ ಲಂಬಾಣಿ ತಾಂಡಾದ ರವಿಕುಮಾರ ರಾಠೋಡ್ (514), ಬಸವ ಕಲ್ಯಾಣ ಸಿರ್ಸಿಯ ವಿಶೇಷ ಚೇತನ ವಿದ್ಯಾರ್ಥಿ ಹೃತ್ವಿಕ್ (610), ಮಂಗಳೂರಿನ ಆದಿತ್ಯ ಕಾಮತ್ (705), ಕಲಬುರಗಿಯ ರೋಹನ್ ಕೊಂಗಿ (646) ತಮ್ಮ ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅನುಭವಗಳನ್ನು ಹಂಚಿಕೊಂಡರು.
ಸುರಪುರದ ರಾಘವೇಂದ್ರ ಭಕ್ರಿ ಮತ್ತು ಯಲಗೋಡದ ಬಸವರಾಜ ಅಂಗಡಿ ಕೂಡಾ ಸಂವಾದದಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ನಡೆಸಿಕೊಟ್ಟರು. ಸಂಗಮೇಶ್ ಮತ್ತು ಮಧು ದೇಶಮುಖ್ ನೆರವಾದರು. ಫೆಬಿ ಶೇಖರ್ ತಾಂತ್ರಿಕ ನೆರವು ನೀಡಿದರು ಎಂದು ಕಾರ್ಯಕ್ರಮ ಸಂಯೋಜಕರಾದ ಅನಿಲ್ ಕುಮಾರ್ ಎಚ್. ಎನ್. ತಿಳಿಸಿದ್ದಾರೆ.