ಬೀದರ್:ಜೂ.8: 2025 ರಲ್ಲಿ ಸೇಡಂನಲ್ಲಿ ಭಾರತೀಯ ಸಂಸ್ಕøತಿ ಉತ್ಸವ ನಡೆಸಲು ನಿರ್ಣಯಿಸಲಾಗಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯರೂ ಆದ ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕ ಬಸವರಾಜ ಪಾಟೀಲ ಸೇಡಂ ಹೇಳಿದರು.
ನಗರದ ಬೆನಕನಹಳ್ಳಿ ರಸ್ತೆಯಲ್ಲಿ ಇರುವ ಗ್ಲೊಬಲ್ ಸೈನಿಕ ಅಕಾಡೆಮಿಯ ಶಾಲಾ ಸಭಾಂಗಣದಲ್ಲಿ ನಡೆದ ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಕಲಬುರಗಿಯ ವಿಕಾಸ ಅಕಾಡೆಮಿ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ವಾರ ನಡೆಯುವ ಉತ್ಸವದಲ್ಲಿ ಒಂದು ಸಾವಿರ ಅತಿಥಿಗಳು ಹಾಗೂ 25 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಉತ್ಸವದಲ್ಲಿ ವಿಕಾಸ ಅಕಾಡೆಮಿಯು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 17 ವರ್ಷಗಳಲ್ಲಿ ಕೃಷಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಯುವ ಸಬಲೀಕರಣ, ಮಹಿಳಾ ಸಬಲೀಕರಣ, ಆರೋಗ್ಯ, ಕಲೆ ಹಾಗೂ ಸಾಹಿತ್ಯ ಕ್ಷೇತ್ರಗಳ ಬೆಳವಣಿಗೆಗೆ ಕೈಗೊಂಡ ಕಾರ್ಯಗಳ ಸಮಗ್ರ ಮಾಹಿತಿ ಪ್ರದರ್ಶನ ಇರಲಿದೆ. ಉತ್ಸವವನ್ನು ಐತಿಹಾಸಿಕಗೊಳಿಸುವ ದಿಸೆಯಲ್ಲಿ ಸಾಕಷ್ಟು ಮುಂಚಿತವಾಗಿ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲು ಯೋಜಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಅಕಾಡೆಮಿ ವತಿಯಿಂದ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳ ಚಿಂತನ-ಮಂಥನ ನಡೆಸಲಾಗಿದೆ. ಪ್ರಸಕ್ತ ಸಾಲಿನ ಯೋಜನೆಗಳನ್ನೂ ರೂಪಿಸಲಾಗಿದೆ ಎಂದು ತಿಳಿಸಿದರು.
ಎಲ್ಲ ತಾಲ್ಲೂಕುಗಳಲ್ಲಿ ಅಕಾಡೆಮಿಯನ್ನು ಇನ್ನಷ್ಟು ಬಲಗೊಳಿಸಲು ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲು ಉದ್ದೇಶಿಸಿದ್ದೇನೆ. ಸಾಹಿತಿ ಸಿದ್ದು ಯಾಪಲಪರವಿ ಅವರು ಉಪನ್ಯಾಸ ಕಾರ್ಯಕ್ರಮಗಳ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ ಕಲೆ, ಸಾಹಿತ್ಯ, ಸಂಸ್ಕøತಿ ಸೇರಿದಂತೆ ಶರಣರ ನಾಡಾದ ಕಲ್ಯಾಣ ಕರ್ನಾಟಕದ ಇತಿಹಾಸವನ್ನು ಪರಿಚಯಿಸಲಿದ್ದಾರೆ. ಅಭಿವೃದ್ಧಿಯ ಕನಸುಗಳನ್ನು ಬಿತ್ತಲಿದ್ದಾರೆ ಹೇಳಿದರು.
ವಿ. ಶಾಂತರೆಡ್ಡಿ 2022-23ನೇ ಸಾಲಿನ ವರದಿ ಮಂಡಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಜಿ. ಮೂಲಿಮನಿ, ವಿಕಾಸ ಅಕಾಡೆಮಿ ಬೀದರ್ ಜಿಲ್ಲಾ ಅಧ್ಯಕ್ಷ, ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ನಿತಿನ್ ಗುತ್ತೇದಾರ್, ಬಿ.ಎಸ್. ಕುದರೆ, ಶೈಲಾ ಸೆಳಗಿ, ಶಿವಶಂಕರ ತರನಳ್ಳಿ, ಯಾದಗಿರಿಯ ನೀಲಕಂಠ ಎಲೆರಿ, ಕಲಬುರಗಿಯ ಅಶೋಕ, ಸೇಡಂನ ಶಂಕರ ಸುಲೆಗಾಂವ್, ವಿಜಯನಗರದ ನಾಗರಾಜ ಮಠಪತಿ, ಬಳ್ಳಾರಿಯ ಅಡವಿ ಸ್ವಾಮಿ ಇದ್ದರು.
ವಿಕಾಸ ಅಕಾಡೆಮಿ ಬೀದರ್ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ನಿರೂಪಿಸಿದರು. ರಾಯಚೂರಿನ ಸುಭಾಷ್ ಪಾಟೀಲ ವಂದಿಸಿದರು.
ಅಕಾಡೆಮಿಯ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಜಿಲ್ಲಾ ಸಂಚಾಲಕರು, ಸಹ ಸಂಚಾಲಕರು ಹಾಗೂ 48 ತಾಲ್ಲೂಕುಗಳ ಸಂಚಾಲಕರು ಸೇರಿ 72 ಜನ ಪಾಲ್ಗೊಂಡಿದ್ದರು.