2025ರೊಳಗೆ ಭಾರತ ಕ್ಷಯಮುಕ್ತ ರಾಷ್ಟ್ರ

ಸಂಜೆವಾಣಿ ನ್ಯೂಸ್
ಮೈಸೂರು: ನ.24:- 2025ರೊಳಗೆ ಭಾರತವನ್ನು ಕ್ಷಯಮುಕ್ತ ರಾಷ್ಟ್ರವನ್ನಾಗಿಸುವ ಸಂಕಲ್ಪವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನೆ ಅಕಾಡೆಮಿ ಮತ್ತು ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಸಮುದಾಯ ಔಷಧ ಮತ್ತು ಉಸಿರಾಟ ಔಷಧ ಇಲಾಖೆ ಸಹಯೋಗದೊಂದಿಗೆ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಗುರುವಾರ ಅಸ್ಸೆಲರೇಟಿಂಗ್ ಪೆÇ?ರೀಗ್ರೆಸ್ ಟುವಡ್ರ್ಸ್ ಎಟಿಬಿ ಫ್ರೀ ವಲ್ರ್ಡ್, ಇನ್ನೋವೇಷನ್ಸ್, ಚಾಲೆಂಜಸ್ ಅಂಡ್ ಸಲ್ಯೂಷನ್ಸ್ ಘೋಷ ವಾಕ್ಯದಡಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಕ್ಷಯರೋಗ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪೌಷ್ಠಿಕ ಆಹಾರದ ಕೊರತೆ ಹಾಗೂ ನಿರ್ಲಕ್ಷ್ಯದಿಂದಾಗಿ ಬಡ ಜನರಲ್ಲಿ ಕ್ಷಯರೋಗ ಲಕ್ಷಣಗಳು ಹೆಚ್ಚಾಗಿದ್ದು, ಲಭ್ಯವಿರುವ ಉಚಿತ ಔಷಧಿಗಳು ಮತ್ತು ಚಿಕಿತ್ಸೆ ಮೂಲಕ ಕ್ಷಯರೋಗ ನಿರ್ಮೂಲನೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕಾಳಜಿಯ ಫಲವಾಗಿ ಇಂದು ದೇಶದೆಲ್ಲೆಡೆ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳನ್ನು ಪ್ರಾರಂಭಿಸಿ ಅಲ್ಲಿ ಮಾರುಕಟ್ಟೆ ದರಕ್ಕಿಂತ ಶೇ.50 ರಿಂದ 90ರಷ್ಟು ಕಡಿಮೆ ದರದಲ್ಲಿ ಜನರಿಕ್ ಔಷಧಿಗಳು ರೋಗಿಗಳಿಗೆ ಲಭ್ಯವಾಗುತ್ತಿವೆ. ಪ್ರಾರಂಭದಲ್ಲಿ ಜನರು ಮತ್ತು ವೈದ್ಯರು ಈ ಔಷಧಿಗಳ ಗುಣಮಟ್ಟದ ಬಗ್ಗೆ ನಿರ್ಲಕ್ಷ್ಯ ತೋರಿದ್ದರು. ಈಗ ಜನರು ಜನರಿಕ್ ಔಷಧಗಳನ್ನು ಕೊಳ್ಳುತ್ತಿದ್ದಾರೆ. ವೈದ್ಯರೂ ಸಹ ಇದೇ ಔಷಧಿಗಳನ್ನು ಕೊಳ್ಳುವಂತೆ ರೋಗಿಗಳಿಗೆ ಸಲಹೆ ನೀಡುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಭೋಪಾಲ್‍ನ ಗಾಂಧಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಸಲೀಲ್ ಭಾರ್ಗವ ಮಾತನಾಡಿ, ಪ್ರಧಾನ ಮಂತ್ರಿಗಳ ಭಾರತ್ ಟಿಬಿ ಮುಕ್ತ್ ಅಭಿಯಾನದ ಪ್ರಕಾರ 2025ರೊಳಗೆ ದೇಶವನ್ನು ಕ್ಷಯ ಮುಕ್ತ ಮಾಡುವ ಉದ್ದೇಶ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಬಿಯಾನ ಪ್ರಾರಂಭಿಸಲಾಗಿದೆ ಎಂದರು.
ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಿವಿಧ ಯೋಜನೆಗಳ ಮೂಲಕ ನಾವು ಕ್ಷಯರೋಗ ನಿರ್ಮೂಲನೆ ಮಾಡುತ್ತೇವೆ. ಟಿಬಿ ಹಾರೇಗಾ, ದೇಶ್ ಜೀತೇಗಾ ಎಂದರು.
ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನೆ ವಿವಿ ಕುಲಾಧಿಪತಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಮ ಕುಲಾಧಿಪತಿ ಡಾ.ಬಿ.ಸುರೇಶ್, ಪಾಂಡಿಚೇರಿ ಸರ್ಕಾರದ ಗೃಹ ಸಚಿವ ಎ.ನಮಶ್ಶಿವಾಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ.ಬೆಟಸೂರಮಠ, ಕುಲಪತಿ ಡಾ.ಸುರೀಂದರ್ ಸಿಂಗ್, ಕುಲಸಚಿವ ಡಾ.ಬಿ.ಮಂಜುನಾಥ್, ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಎಚ್.ಬಸವನಗೌಡಪ್ಪ, ಡಾ.ಡಿ.ಸುನೀಲ್ ಕುಮಾರ್, ಡಾ.ಬಿ.ಎಸ್.ಜಯರಾಜ್, ಡಾ.ನಯನಾ ಶಾಬಾದಿ ಮತ್ತಿತರರು ಉಪಸ್ಥಿತರಿದ್ದರು.