2024ರ ಸಾಂಸ್ಕೃತಿಕ ಯುದ್ಧಕ್ಕೆ ಸಿದ್ಧವಾಗಬೇಕಿದೆ: ರಾಮಯ್ಯ

ಸಂಜೆವಾಣಿ ನ್ಯೂಸ್
ಮೈಸೂರು: ಜ.14:- 2024ರ ಭೀಕರ ಭಾರತಕ್ಕೆ ವೇದಿಕೆ ಸಿದ್ಧಪಡಿಸಲಾಗಿದ್ದು, ಎಲ್ಲಾ ರಂಗಗಳನ್ನು ತನ್ನ ಹಿಡಿತಕ್ಕೆ ಒಳಪಡುವ ನೂರುವರ್ಷದ ನೀಲನಕ್ಷೆ ತಯಾರಿಸಲಾಗಿದೆ. ನಮ್ಮ ಪೂರ್ವಿಕರ ಪರಂಪರೆ ಇತಿಹಾಸ, ನುಡಿಗಟ್ಟುಗಳನ್ನು ಮರುವ್ಯಾಖ್ಯಾನಿಸುವ ಮೂಲಕ ಸಾಂಸ್ಕೃತಿಕ ಯುದ್ಧಕ್ಕೆ ಸಿದ್ಧವಾಗಬೇಕಿದೆ ಎಂದು ಬರಹಗಾರ, ಸಂಸಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ನಗರದ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯಲ್ಲಿ ಶನಿವಾರ ಶ್ರಮಣ ಸಂಸ್ಕೃತಿ ಟ್ರಸ್ಟ್ ಮತ್ತು ಬಯಲು ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ 90ರ ನಂತರದ ಕರ್ನಾಟಕ ರಾಜ್ಯ ಮಟ್ಟದ ವಿಚಾರ ಕಮ್ಮಟದಲ್ಲಿ ಅವರು ಮಾತನಾಡಿದರು
ದೇಶದ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಪಹರಿಸಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದ್ದು, ಅದರಿಂದ ಹೊರಬರಲು ಕಿರುಕುವುರಗಳ ಮೂಲಕ ಉಸಿರಾಡಿಸಿ ಅಂಬೇಡ್ಕರ್ ಅವರು ಕಂಡ ನಿಜವಾದ ಪ್ರಜಾಪ್ರಭುತ್ವವನ್ನು ಕಟ್ಟಬೇಕಿದೆ ಎಂದು ಅಭಿಪ್ರಾಯಿಸಿದರು.
ದೇಶದ ಕಾರ್ಯಾಂಗ, ನ್ಯಾಯಾಂಗ ಮತ್ತು ಆಡಳತ ವ್ಯವಸ್ಥೆಯನ್ನು ಅಕ್ರಮಿಸಿಕೊಳ್ಳಲಾಗಿದೆ. ನಿಜವಾದ ಪ್ರಭುತ್ವದ ಕಲ್ಪನೆಗಳು ದೂರಾಗಿ ನಿರಂಕುಶ ಪ್ರಭುತ್ವ ನಮ್ಮನ್ನು ಆಳುತ್ತಿದೆ. ಈಗಾಗಲೇ ನೂರುವರ್ಷದ ನೀಲ ನಕ್ಷೆಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ. 2024 ರ ಭಾರತ ಭೀಕರವಾಗಿದ್ದು ಎಲ್ಲಾ ರಂಗಗಳು ಫ್ಯಾಸಿಸಮ್ ಗೆ ಒಳಪಡಲು ಸಿದ್ಧಗೊಂಡಿವೆ ಎಂದು ಹೇಳಿದರು.
ಸಂವಿಧಾನ ಜಾರಿಗೆ ಬಂದು ಇಷ್ಟು ವರ್ಷಗಳಲ್ಲಿ ಸಂವಿಧಾನ ಮೂಲ ಆಶಯವಾದ ಸ್ವಾತಂತ್ರ್ಯ, ಸಮಾನತೆ, ಭಾತೃತ್ವದ ಆಶಯಗಳನ್ನು ಜೀವನ ವಿಧಾನವನ್ನು ಮೈಗೂಡಿಸಿಕೊಳ್ಳುವಲ್ಲಿ ನಾವು ವಿಫಲವಾಗಿದ್ದೇವೆ. ಈ ಮೂರು ಅಂಶಗಳ ತಳಹದಿಯಲ್ಲಿ ಶಿಕ್ಷಣ ರೂಪುಗೊಳ್ಳುವ ಬದಲು ಅನೈತಿಕ, ಅಸಮಾನತೆ ಧೋರಣೆಗಳಿಂದ ರೂಪುಗೊಂಡಿದೆ. ಹೀಗಾಗಿ ಮೌಲ್ಯಗಳು ಕುಸಿಯುತ್ತಿದ್ದು, ಇಂದಿನ ಪರಿಸ್ಥಿತಿಗೆ ಕಾರಣ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಆಶಯದ ಸಂವಿಧಾನ ಇಂದಿಗೂ ಜಾರಿಯಾಗಿಲ್ಲ. ಚಳವಳಿಗಳು, ಶೈಕ್ಷಣಿಕ ಹೋರಾಟಗಳು ಸಂಪೂರ್ಣ ಕೊನೆಯ ಹಂತಕ್ಕೆ ತಲುಪಿವೆ. ಈಗ ನಾವು ಪ್ರತಿಯಾಗಿ ಚಳವಳಿಗಳನ್ನು ಕಟ್ಟಬೇಕು, ಸಂಸ್ಕೃತಿಯನ್ನು ಕಟ್ಟಬೇಕು, ಕ್ರಾಂತಿಯನ್ನು ಕಟ್ಟಬೇಕು ಎಂದು ಹೇಳಿದರು.
ನೈಜಪ್ರಜಾಪ್ರಭುತ್ವದ ಆಶಯ ಹೊಂದಿರುವ ರಾಷ್ಟ್ರೀಯ ಪಕ್ಷಗಳಾಗಬಹುದು, ಪ್ರಾದೇಶಿಕ ಪಕ್ಷಗಳಾಗಬಹುದು ತಮ್ಮಪ್ರಣಾಳಿಕೆಯಲ್ಲಿ ಹೆಣ್ಣು, ಹಸಿವು,ತಾರತಮ್ಯ ವನ್ನು ಒಟ್ಟುಗೂಡಿಸುವ ಜನಪರ ಆಶೋತ್ರಗಳಿಗೆ ಅನುಗುಣವಾದ ಪ್ರಣಾಳಿಕೆಯನ್ನು ಸಿದ್ಧಪಡಿಸಿ ಜನಪರಗೊಳಿಸಿಬೇಕಿದೆ. ಆಗಾದಾಗ ಮಾತ್ರ ಫ್ಯಾಸಿಸಮ್ ಶಕ್ತಿಗಳನ್ನು ದೂರ ಇಡಬಹುದು ಎಂದು ತಿಳಿಸಿದರು.
ಸಾಹಿತಿ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಇಂದು ಕಪ್ಪು ಹಣ ಪ್ರಜಾಪ್ರಭುತ್ವವನ್ನು ನಿಯಂತ್ರಿಸುತ್ತಿದೆ. ಕಪ್ಪು ಹಣ ಇಲ್ಲದವರು ರಾಜಕೀಯ ನಾಯಕರಾಗಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ. ಭ್ರಷ್ಟಚಾರಕ್ಕೆ ಇಂದು ಸಾರ್ವಜನಿಕರ ಸಮ್ಮತಿ ಸಿಕ್ಕಿದೆ ಎಂದು ವಿಷಾದಿಸಿದರು.
ಸ್ವಾತಂತ್ರ್ಯದ ನಂತರ ದೇಶದಲ್ಲಿ ಸಂರಕ್ಷಣೆ ಮಾಡಿದ್ದ ಮೌಲ್ಯಗಳು ಕಳೆದ 40 ವರ್ಷಗಳಲ್ಲಿ ತಲೆ ಕೆಳಾಗಿವೆ. ಜಾತಿ ನಡುವೆ ಅಸಹನೆ ದಿನ ದಿನ ಹೆಚ್ಚಾಗುತ್ತಿದೆ.
ಸ್ವಾತಂತ್ರ್ಯದ ನಂತರ ಎರಡು ಮೂರು ದಶಕಗಳಲ್ಲಿ ಜಾತಿ ವಿಜೃಂಭಣೆ, ಜಾತಿ ಶ್ರೇಷ್ಠತೆಯನ್ನು ಹೇಳುವ ಪ್ರವೃತ್ತಿ ಬಹಳ ಕಡಿಮೆ ಇತ್ತು. ಜಾತಿ ವೈಭವೀಕರಣವೂ ಅವಮಾನಕಾರ ಸಂಗತಿ ಎನ್ನುವ ಕಡೆಗೆ ಭಾರತ ಚಲಿಸುತ್ತಿತ್ತು. ಆದರೆ, ಆ ಚಾಲನೆ ಪ್ರಸ್ತುತ ಹಿಂತಿರುಗು ಪಡೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಾತಿಕ ಆಚರಣೆಗಳ ಲಂಚತನಗಳನ್ನು ವೈಭವೀಕರಿಸಲಾಗುತ್ತಿದೆ. ಅದಕ್ಕಾಗಿ ಅಧ್ಯಾತ್ಮಿಕವನ್ನು ಮಾರಾಟ ಮಾಡುವ ಸ್ವಾಮೀಜಿಗಳ ಸಂಖ್ಯೆ ವಿಪರೀತವಾಗುತ್ತಿದೆ. ಸಾಮಾಜಿಕ ಜವಾಬ್ದಾರಿಗಳ ವ್ಯಕ್ತಿ ದೇವಸ್ಥಾನಕ್ಕೆ ಹೋಗಿ ಅಧ್ಯಾತಿಕನಾಗಿದ್ದೇನೆ ಎಂದು ಹೇಳಿದರು.
ರವಿಕುಮಾರ್ ಬಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರೆ. ಹಣಕಾಸು ಇಲಾಖೆ ಪ್ರಧಾನಕಾರ್ಯದರ್ಶಿ ಎಲ್.ಕೆ.ಅತೀಕ್,ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ನಿರ್ದೇಶಕಿ ಕೆ.ಲಕ್ಷ್ಮಿ ಪ್ರಿಯಾ ಉಪಸ್ಥಿತರಿದ್ದರು. ಲವ ಕಾರ್ಯಕ್ರಮ ನಿರೂಪಿಸಿದರು.