2024ರೊಳಗೆ 2ಎ ಮೀಸಲು ನೀಡದಿದ್ದರೆ  ತಕ್ಕ ಪಾಠ  – ಪಂಚಮಸಾಲಿ ಶ್ರೀ,ಎಚ್ಚರಿಕೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 9 :-  ರಾಜ್ಯದಲ್ಲಿ 80 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮುದಾಯಕ್ಕೆ 2024 ರೊಳಗೆ 2ಎ ಮೀಸಲಾತಿ ನೀಡದಿದ್ದರೆ ಕೇಂದ್ರ ಮತ್ತು ರಾಜ್ಯ ಆಡಳಿತ ಸರ್ಕಾರಗಳಿಗೆ  ತಕ್ಕ ಪಾಠ ಕಲಿಸಲಾಗುವುದು ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ತಾಲೂಕಿನ ಎಂ.ಬಿ.ಅಯ್ಯನಹಳ್ಳಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಒತ್ತಾಯಿಸಿ ಪಾದಯಾತ್ರೆ, 74 ದಿನ ಸತ್ಯಾಗ್ರಹ ಮಾಡಿದ್ದೆವು. ಆದರೆ, ಚುನಾವಣೆ ಸಮೀಪಿಸುವಾಗ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಪಂಚಮಸಾಲಿ ಸಮುದಾಯವನ್ನು 2ಡಿ ಮೀಸಲು ನೀಡಿತ್ತು. ಆದರೆ, ಚುನಾವಣೆ ನೀತಿ ಸಂಹಿತೆಯಿಂದ ತಡೆಯಾಗಿದ್ದಲ್ಲದೆ, ನ್ಯಾಯಾಲಯದಲ್ಲೂ ಮೀಸಲು ವಿಚಾರಕ್ಕೆ ತಡೆ ನೀಡಿತ್ತು. ಬಿಜೆಪಿ ಸರಕಾರ ಮೀಸಲಾತಿ ನೀಡಲು ಮೀನಮೇಷ ಎಣಿಸಿದ್ದರಿಂದ ಚುನಾವಣೆಯಲ್ಲಿ ತಕ್ಕ ಪ್ರತಿಫಲ ಸಿಕ್ಕಿದೆ. ಈಗಿನ ಕಾಂಗ್ರೆಸ್ ಸರಕಾರ ಪಂಚಮಸಾಲಿ ಸೇರಿ ವೀರಶೈವ ಲಿಂಗಾಯತ ಒಳ ಪಂಗಡಗಳಿಗೂ ಅನ್ವಯವಾಗುವಂತೆ 2ಎ ಮೀಸಲಾತಿ ನೀಡಲಿ. ಇಲ್ಲವೇ ಈಗಿರುವ 2ಡಿ ಮೀಸಲಿನ ಗೊಂದಲ ನಿವಾರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ವಿಶ್ವಾಸವಿದೆ. ಹಾಗೊಂದು ವೇಳೆ ಮೀಸಲು ನೀಡಲು ರಾಜ್ಯ ಸರಕಾರ ಹಿಂದೇಟು ಹಾಕಿದರೆ  ರಾಜ್ಯದಲ್ಲೂ ಮತ್ತು ಕೇಂದ್ರದಲ್ಲೂ ಮುಂಬರುವ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯ ತಕ್ಕ ಪಾಠ ಕಲಿಸುವುದು ಶತಃಸಿದ್ಧ. ಅಧಿವೇಶನದ ನಂತರ ಪಂಚಮಸಾಲಿ ಸಮುದಾಯದ 2ಎ ಮೀಸಲು ಕುರಿತು ಚರ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಹೋರಾಟ ಅನಿವಾರ್ಯ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ಕೆ. ತಿಪ್ಪೇಸ್ವಾಮಿ, ಪಂಚಮಸಾಲಿ ಸಮುದಾಯದ ತಾಲೂಕು ಅಧ್ಯಕ್ಷ ಹೊಂಬಾಳೆ ರೇವಣ್ಣ, ಬಣವಿಕಲ್ಲು ಎರಿಸ್ವಾಮಿ, ಹುಲಿಕೆರೆ ರಮೇಶ್ ಗೌಡ ಇತರರಿದ್ದರು.