2023ರ ಚುನಾವಣೆಯ ಆಖಾಡಕ್ಕೆ ನಿತಿನ್ ಗುತ್ತೇದಾರ್ ಸಜ್ಜು: ಕ್ಷೇತ್ರದ ಜನರಲ್ಲಿ ಗೆಲುವಿನ ವಿಶ್ವಾಸ…!

ಅಫಜಲಪುರ : ಜ.18:ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಅವಿಭಜಿತ ಕಲಬುರ್ಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಬಿಜೆಪಿಯ ಯುವ ಮುಖಂಡ ಬೆಂಬಲಿಗರ ಹಾಗೂ ಕ್ಷೇತ್ರದ ಜನರ ಒತ್ತಾಸೆಯ ಮೇರೆಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಅಫಜಲಪುರ ಕ್ಷೇತ್ರದಲ್ಲಿ ಸ್ಪರ್ಧಿಸಲು ಸರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.
ಕ್ಷೇತ್ರದ ಜನರ ನೋವು, ನಲಿವುಗಳಲ್ಲಿ ಸಕಾಲದಲ್ಲಿ ಭಾಗಿಯಾಗುವ ನಿತಿನ್ ಗುತ್ತೇದಾರ್ ಅವರು ಕ್ಷೇತ್ರದಲ್ಲಿ ಪ್ರಭಾವಿ ಯುವ ಮುಖಂಡರಾಗಿ ಹೊರಹೊಮ್ಮಿದ್ದು, ಅವರ ಸೇವೆಯನ್ನು ಶಾಸಕರಾಗಿ ಆಯ್ಕೆ ಮಾಡುವ ಮೂಲಕ ಸಮಗ್ರ ಕ್ಷೇತ್ರದ ಅಭಿವೃದ್ಧಿಗೆ ಒದಗಿಸಿಕೊಡಲು ಕ್ಷೇತ್ರದ ಜನರು ಹೆಚ್ಚು ಒಲವು ಹೊಂದಿದ್ದಾರೆ.
ಗುತ್ತೇದಾರ್ ಅವರ ಕುಟುಂಬಕ್ಕೆ ರಾಜಕೀಯ ಏನೂ ಹೊಸದೇನಲ್ಲ. ಆದಾಗ್ಯೂ, ನಿತಿನ್ ಗುತ್ತೇದಾರ್ ಅವರ ತಂದೆ ದಿ. ವೆಂಕಯ್ಯ ಗುತ್ತೇದಾರ್ ಅವರು ಕ್ಷೇತ್ರದಲ್ಲಿ ಪ್ರಭಾವಿ ನಾಯಕರಾಗಿದ್ದರೂ ಸಹ ಯಾವುದೇ ರೀತಿಯಲ್ಲಿ ರಾಜಕಾರಣವನ್ನು ಮಾಡಲಿಲ್ಲ. ಬದಲಾಗಿ ಜನಸೇವಕರನ್ನು ಗುರುತಿಸಿ ಅವರನ್ನು ಶಾಸಕರನ್ನಾಗಿ ಮಾಡಿದ ಕಿಂಗ್ ಮೇಕರ್ ಎಂದೆನಿಸಿಕೊಂಡಿದ್ದರು. ದಿ. ವೆಂಕಯ್ಯ ಗುತ್ತೇದಾರ್ ಅವರು ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರಂತಹ ಘಟಾನುಘಟಿ ನಾಯಕರಿಗೂ ಸಹ ಸಲಹೆ ಹಾಗೂ ಮಾರ್ಗದರ್ಶನ ನೀಡುವಷ್ಟರ ಮಟ್ಟಿಗೆ ಉನ್ನತ ವ್ಯಕ್ತಿತ್ವ ಹೊಂದಿದ್ದರು. ದಿ. ವೆಂಕಯ್ಯ ಗುತ್ತೇದಾರ್ ಅವರು ಒಬ್ಬ ವ್ಯಕ್ತಿ ಆಗಿರಲಿಲ್ಲ. ಬದಲಾಗಿ ಅವರು ಕ್ಷೇತ್ರದ ಶಕ್ತಿಯಾಗಿದ್ದರು. ಹೀಗಾಗಿ ಅವರ ಹೆಸರಿನ ಮೇಲೆಯೇ ಕ್ಷೇತ್ರದಲ್ಲಿ ಈವರೆಗೂ ಶಾಸಕರಾಗಿ ಆಯ್ಕೆಯಾಗುವಂತಹ ವಾತಾವರಣ ನಿರ್ಮಾಣವಾಗಿದೆ.
ಕ್ರಿಕೆಟ್ ಆಡುತ್ತಿದ್ದ ಹಿರಿಯ ಪುತ್ರ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರನ್ನು ತಂದೆ ದಿ. ವೆಂಕಯ್ಯ ಗುತ್ತೇದಾರ್ ಅವರು 1985 ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದರು. ಆ ಸಂದರ್ಭದಲ್ಲಿ ಯೂತ್ ಐಕಾನ್ ಆಗಿದ್ದ ದಿ. ಮಾಜಿ ಪ್ರಧಾನಿ ರಾಜೀವಗಾಂಧಿ ಅವರೂ ಸಹ ಯುವಕರಿಗೆ ಆದ್ಯತೆ ಕೊಟ್ಟಿದ್ದರು. ಆ ಸಂದರ್ಭದಲ್ಲಿ ದಿ. ಶಿವಯ್ಯ ಗುತ್ತೇದಾರ್ ಮತ್ತು ದಿ. ಬಸಯ್ಯ ಗುತ್ತೇದಾರ್ ಅವರನ್ನು ಚುನಾವಣಾ ಕಣಕ್ಕಿಳಿಸುವ ಕುರಿತು ಚಿಂತನೆ ಆರಂಭಗೊಂಡಿತ್ತು. ಆದಾಗ್ಯೂ, ಆ ಸಂದರ್ಭದಲ್ಲಿ ಬಿಕಾಂ ಪದವೀಧರನಾಗಿದ್ದ, ಹದಿಹರೆಯದ ಯುವಕರಾಗಿದ್ದ ಮಾಲಿಕಯ್ಯ ಗುತ್ತೇದಾರ್ ಅವರನ್ನೇ ಕಣಕ್ಕಿಳಿಸಿದರು. ಹೀಗಾಗಿ ಆ ಅದೃಷ್ಟದಿಂದ ಮಾಲಿಕಯ್ಯ ಗುತ್ತೇದಾರ್ ಅವರು ಐದು ಬಾರಿ ಶಾಸಕರಾಗಿ ಹಾಗೂ ಒಮ್ಮೆ ಜೆ.ಎಚ್. ಪಟೇಲ್ ಅವರ ಸರ್ಕಾರದಲ್ಲಿ ರಾಜ್ಯದ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮತ್ತು ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದರು.
ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರು ಸೋಲಿಲ್ಲದ ಸರ್ದಾರರಾಗಿ ಕ್ಷೇತ್ರದ ಶಾಸಕರಾಗಿದ್ದರಿಂದ ದಿ. ವೆಂಕಯ್ಯ ಗುತ್ತೇದಾರ್ ಅವರು ರಾಜಕಾರಣದಲ್ಲಿ ತಲೆ ಹಾಕದೇ ತಮ್ಮ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಅವರ ಇನ್ನೋರ್ವ ಪುತ್ರ ದಿ. ಅಶೋಕ್ ಗುತ್ತೇದಾರ್ ಅವರು ಇಡೀ ಕ್ಷೇತ್ರದ ಸರ್ವ ಸಮುದಾಯದ ಕಲ್ಯಾಣದ ಹಿತದೃಷ್ಟಿಯಿಂದ ಕೆಲಸ ಕಾರ್ಯಗಳನ್ನು ಆರಂಭಿಸಿದರು. ಇದು ಒಂದು ರೀತಿಯಲ್ಲಿ ದಿ. ವೆಂಕಯ್ಯ ಗುತ್ತೇದಾರ್ ಅವರ ಕೆಲಸದ ಹೊಣೆಯನ್ನು ದಿ. ಅಶೋಕ್ ಗುತ್ತೇದಾರ್ ಅವರೇ ವಹಿಸಿಕೊಂಡಂತೆ ಆಗಿತ್ತು. ನ್ಯಾಯ ಪಂಚಾಯಿತಿಗಳನ್ನು ಪರಿಹರಿಸುವ ಹಾಗೂ ಇನ್ನಿತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ದಿ. ಅಶೋಕ್ ಗುತ್ತೇದಾರ್ ಅವರೇ ನಿಸ್ಸೀಮರಾಗಿದ್ದರು. ಇದರಿಂದಾಗಿ ಶಾಸಕರಾಗಿದ್ದ ಮಾಲಿಕಯ್ಯ ಗುತ್ತೇದಾರ್ ಅವರು ತಮ್ಮ ಅವಧಿಯನ್ನು ಯಶಸ್ವಿಯಾಗಿ ಪೂರೈಸುವಲ್ಲಿ ಸಾಧ್ಯವಾಗಿತ್ತು.
ಅನಿರೀಕ್ಷಿತವಾಗಿ ದಿ. ಅಶೋಕ್ ಗುತ್ತೇದಾರ್ ಅವರ ನಿಧನವು ಗುತ್ತೇದಾರ್ ಕುಟುಂಬಕ್ಕೆ ಬರಸಿಡಿಲು ಬಡಿದಂತಾಯಿತು. ಅವರ ಸ್ಥಾನವನ್ನು ತುಂಬಲು ಆಗದಿದ್ದರೂ ಬರುಬರುತ್ತ ಆ ಸ್ಥಾನವನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ದಿ. ವೆಂಕಯ್ಯ ಗುತ್ತೇದಾರ್ ಅವರ ಕೊನೆಯ ಪುತ್ರ ನಿತಿನ್ ಗುತ್ತೇದಾರ್ ಅವರೇ ವಹಿಸಿಕೊಂಡರು. ಜನರೂ ಸಹ ನಿತಿನ್ ಗುತ್ತೇದಾರ್ ಅವರನ್ನೇ ನಂಬಿಕೊಳ್ಳಲು ಆರಂಭಿಸಿದರು.
ನಿತಿನ್ ಗುತ್ತೇದಾರ್ ಅವರು ಈಗ ಬಿಜೆಪಿಯಲ್ಲಿ ಪ್ರಭಾವಿ ಯುವ ಮುಖಂಡರಾಗಿ ಹೊರಹೊಮ್ಮಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯ ಸಂಘಟನೆಯನ್ನು ಬಲಪಡಿಸುವಲ್ಲಿ ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರು 36000 ಹೆಚ್ಚಿನ ಮತಗಳನ್ನು ಪಡೆಯುವಲ್ಲಿ ನಿತಿನ್ ಗುತ್ತೇದಾರ್ ಅವರ ಹಿನ್ನಲೆಯ ಪ್ರಮುಖ ಪಾತ್ರವನ್ನು ಕ್ಷೇತ್ರದ ಜನರು ಯಾರೂ ಮರೆಯಲಾರರು. ಇಡೀ ಕ್ಷೇತ್ರದಲ್ಲಿ ಅಷ್ಟೇ ಅಲ್ಲ, ಇಡೀ ಕಲಬುರ್ಗಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಹಾಗೂ ಬಲಪಡಿಸಲು ನಿತಿನ್ ಗುತ್ತೇದಾರ್ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಅಣ್ಣ ಮಾಲಿಕಯ್ಯ ಗುತ್ತೇದಾರ್ ಅವರ ಮುಂದಾಳತ್ವದಲ್ಲಿಯೇ ಬಹುದಿನಗಳ ಬೇಡಿಕೆಯಾದ ನೀಲೂರ್ ರೈಲ್ವೆ ಮೇಲ್ಸೆತುವೆ ಅಗಲೀಕರಣ ಕಾರ್ಯವನ್ನು ಕೈಗೊಳ್ಳುವಲ್ಲಿ ಸಫಲರಾದರು. ಕೋವಿಡ್ ಭೀತಿಯ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಆಹಾರ ಮತ್ತು ಲಸಿಕೆ ಮತ್ತು ಇನ್ನಿತರ ಸೌಲಭ್ಯಗಳನ್ನು ಮನೆ, ಮನೆಗೆ ತಲುಪಿಸುವಲ್ಲಿ ನಿತಿನ್ ಗುತ್ತೇದಾರ್ ಅವರ ಪಾತ್ರ ಅತ್ಯಂತ ಹಿರಿದು. ಭಾಗ್ಯವಂತಿ ದೇವಿಯ ದೇವಸ್ಥಾನ ಹೊಂದಿರುವ ಸುಕ್ಷೇತ್ರ ಘತ್ತರಗಿಯಲ್ಲಿ ಸರ್ಕಾರಿ ಶಾಲೆಗೆ ಜಮೀನು ಕೊಡುವ ದಿಸೆಯಲ್ಲಿ ಸುಮಾರು 17ಲಕ್ಷ ರೂ.ಗಳ ದೇಣಿಗೆಯನ್ನು ಸೊನ್ನದ ಡಾ. ಶಿವಾನಂದ್ ಸ್ವಾಮೀಜಿ ಅವರ ಅಕ್ಷರ ಜೋಳಿಗೆಗೆ ಹಾಕಿದ ಕೊಡುಗೈ ದಾನಿಯಾಗಿದ್ದಾರೆ. ಆಟ, ಪಾಟ, ನಾಟಕ ಸೇರಿದಂತೆ ಜನರ ಮನರಂಜನಾತ್ಮಕ ಹಾಗೂ ಆಧ್ಯಾತ್ಮಿಕ ಕೆಲಸ ಕಾರ್ಯಗಳಿಗೂ ಉದಾರ ದೇಣಿಗೆಯನ್ನು ತಂದೆ ದಿ. ವೆಂಕಯ್ಯ ಗುತ್ತೇದಾರ್ ಅವರಂತೆಯೇ ಕೊಡುವ ಮನೋಭಾವವನ್ನು ರೂಢಿಸಿಕೊಂಡಿದ್ದಾರೆ.
ಈಗ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಗುಜರಾತ್ ಮಾದರಿಯಲ್ಲಿಯೇ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಜರುಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾಗಿ ಕ್ಷೇತ್ರದ ಜನರು ಯೂತ್ ಐಕಾನ್ ನಿತಿನ್ ಗುತ್ತೇದಾರ್ ಅವರನ್ನು ಕ್ಷೇತ್ರದ ಶಾಸಕರನ್ನಾಗಿ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. ಆ ಹಿನ್ನೆಲೆಯಲ್ಲಿ ನಿತಿನ್ ಗುತ್ತೇದಾರ್ ಅವರೂ ಸಹ ಸ್ಪರ್ಧಿಸಲು ನಿರ್ಧರಿಸಿದ್ದು, ಬಿಜೆಪಿ ಮತ್ತು ರಾಜ್ಯ ನಾಯಕರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿರುವ ನಿತಿನ್ ಗುತ್ತೇದಾರ್ ಅವರು ಕ್ಷೇತ್ರದಲ್ಲಿ ಹಿರಿಯರಿಗೆ ಹಾಗೂ ವಿರೋಧ ಪಕ್ಷಗಳವರಿಗೂ ಸಹ ತಮಗೆ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಬಹುತೇಕ ಕಲಬುರ್ಗಿ ಜಿಲ್ಲಾ ಪಂಚಾಯಿತಿ ಸದಸ್ಯರು ಶಾಸಕರಾದ ಉದಾಹರಣೆಗಳಿವೆ. ಅಲ್ಲಮಪ್ರಭು ಪಾಟೀಲ್, ಅಮಾತೆಪ್ಪ ಕಂದಕೂರ್, ಡಾ. ಶರಣಪ್ರಕಾಶ್ ಪಾಟೀಲ್, ದತ್ತಾತ್ರೇಯ್ ಪಾಟೀಲ್ ರೇವೂರ್ ಮುಂತಾದವರು ಶಾಸಕರಾಗಿದ್ದಾರೆ. ಆ ಸಾಲಿನಲ್ಲಿ ನಿತಿನ್ ಗುತ್ತೇದಾರ್ ಅವರನ್ನು ಸೇರಿಸಲು ಕ್ಷೇತ್ರದ ಜನರು ಉತ್ಸುಕರಾಗಿದ್ದಾರೆ.