2021ಕ್ಕೆ ಮುಗಿಯದ ಕಾಮಗಾರಿ -ಹನಿನೀರಿಗೂ ಹಪಾಹಪಿಸುವ ಜನತೆ

ಕೂಡ್ಲಿಗಿ.ಮಾ.26:- ತಾಲೂಕಿನ ಜನತೆಯ ಮಹತ್ವಕಾಂಕ್ಷೆಯ ಉಜ್ಜಿನಿ ಸೇರಿದಂತೆ 217ಹಳ್ಳಿಗಳಿಗೆ ತುಂಗಾಭದ್ರ ಹಿನ್ನೀರಿನಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ಪ್ರಾರಂಭವಾಗಿ 3 ವರ್ಷ ಕಳೆದರೂ ಇನ್ನೂ ಶೇಕಡ 60 ರಷ್ಟು ಕಾಮಗಾರಿ ಮಾತ್ರ ನಡೆದಿದ್ದು ಖಾಲಿ ಪೈಪ್ ಗಳನ್ನಷ್ಟೇ ನೋಡಿ ತಾಲೂಕಿನ ಜನತೆ ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ. ಈ ಯೋಜನೆಯ ಕಾಮಗಾರಿ ಯಾವಾಗ ಮುಗಿಯುತ್ತದೆ ಎಂದು ಚಾತಕಪಕ್ಷಿಯಂತೆ ಜನತೆ ಕಾಯುತ್ತಿದ್ದಾರೆ.
ಏನಿದು ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ತುಂಗಾಭದ್ರ ಜಲಾಶಯದ ಹಿನ್ನೀರಿನಿಂದ ಹೊಸಪೇಟೆ ತಾಲೂಕಿನ ಕೆಲವು ಭಾಗಗಳು ಸೇರಿದಂತೆ ಕೂಡ್ಲಿಗಿ, ಚಳ್ಳಕೆರೆ ಹಾಗೂ ಪಾವಗಡ ತಾಲೂಕಿನ ಹಳ್ಳಿಗಳಿಗೆ 2132 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ತಯಾರಿಸಿದ್ದು 2018 ಡಿಸೆಂಬರ್ ನಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು ಹೈದರಬಾದ್ ನ ಮೆಗಾ ಇಂಜಿನಿಯರ್‍ಸ್ ನವರು ಗುತ್ತಿಗೆ ಪಡೆದಿದ್ದಾರೆ. 2132 ಕೋಟಿ ಕಾಮಗಾರಿಯಲ್ಲಿ ಕೂಡ್ಲಿಗಿ ತಾಲೂಕಿಗೆ 217 ಹಳ್ಳಿಗಳಿಗೆ 713.4ಕೋಟಿ ಹಣವನ್ನು ತೆಗೆದಿರಿಸಬಾಗಿದ್ದು ಇದರಲ್ಲಿ ಈಗಾಗಲೇ 425 ಕೋಟಿ ಹಣ ಖರ್ಚಾಗಿದ್ದು ಶೇಕಡ 60ರಷ್ಟು ಕಾಮಗಾರಿಯಾಗಿದೆ. ಆದರೆ ಜನತೆ ಮಾತ್ರ ಕೊಳವೆಬಾವಿಗಳ ಪ್ಲೋರೈಡ್ ನೀರಿನಿಂದ ಹತ್ತು ಹಲವು ರೋಗಗಳಿಗೆ ತುತ್ತಾಗಿ ನಲುಗುತಿದ್ದಾರೆ.
ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ 2021ಕ್ಕೆ ಮುಗಿಯಬೇಕಿತ್ತು ಆದರೆ ತುಂಗಾಭದ್ರಾ ಹಿನ್ನೀರಿನಲ್ಲಿ ನೀರು ಇರುವುದ್ದರಿಂದ ಕಾಮಗಾರಿ ತಡವಾಗುತ್ತದೆ ಎಂದು ಅಧಿಕಾರಿಗಳು ಸಮಜಾಹಿಷಿ ನೀಡುತ್ತಿದ್ದು 2022ಕ್ಕೆ ಕಾಮಗಾರಿ ಮುಗಿಯುತ್ತದೆ ಎಂದು ತಿಳಿಸುತ್ತಾರೆ. ಉಜ್ಜಿನಿ ಸೇರಿದಂತೆ 217 ಹಳ್ಳಿಗಳಲ್ಲಿ ಮೊದಲ ಹಂತದಲ್ಲಿ 71 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ದೊರೆಯಲಿದ್ದು ಉಳಿದ 146 ಹಳ್ಳಿಗಳಿಗೆ ಎರಡನೇ ಹಂತದಲ್ಲಿ ಶಾಶ್ವತ ಕುಡಿಯುವ ನೀರಿನ ಭಾಗ್ಯ ದೊರೆಯಲಿದೆ.
ಪ್ರತಿವರ್ಷ ಬೇಸಗೆ ಬಂತೆಂದರೆ ತಾಲೂಕಿನ ಗುಡೇಕೋಟೆ, ಹೊಸಹಳ್ಳಿ ಹೋಬಳಿಯ ಹಳ್ಳಿಗಳಲ್ಲಿ ಹನಿ ನೀರಿಗೂ ಹಪಾಹರಿಸವ ಪರಿಸ್ಥಿತಿ ಇರುತಿತ್ತು ಕಳೆದ ಮಳೆಗಾಲದಲ್ಲಿ ಗುಡೇಕೋಟೆ ಹೋಬಳಿಯಲ್ಲಿ ಉತ್ತಮ ಮಳೆಯಾಗಿ ಹತ್ತಾರು ಕೆರೆ ಕಟ್ಟೆಗಳಿಗೆ ನೀರು ಬಂದಿರುವುದ್ದರಿಂದ ಗುಡೇಕೋಟೆ ಹೋಬಳಿಯಲ್ಲಿ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಹೊಸಹಳ್ಳಿಯಲ್ಲಿ ಕಡಿಮೆ ಮಳೆಯಾಗಿದ್ದರಿಂದ ಈ ಭಾಗದಲ್ಲಿ ಹೊಸಹಳ್ಳಿ ಸೇರಿದಂತೆ 42 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಾರಂಭವಾಗಬಹುದೆಂದು ಈಗಾಗಲೇ ಹಳ್ಳಿಗಳನ್ನು ಪಟ್ಟಿ ಮಾಡಿ ಅನುದಾನಕ್ಕೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳಲಿದ್ದು ಅಧಿಕಾರಿಗಳು ಮುನ್ನೆಚ್ಚರಿಕೆವಹಿಸಬೇಕಾಗಿದೆ.

ಕೂಡ್ಲಿಗಿ ತಾಲೂಕಿನ ಉಜ್ಜಿನಿ ಸೇರಿದಂತೆ 217 ಹಳ್ಳಿಗಳ ಜನತೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು 2022ಕ್ಕೆ ಕಾಮಗಾರಿ ಮುಗಿಯಲಿದ್ದು ಅಲ್ಲಿಯವರೆಗೂ ಕೆಲವು ಹಳ್ಳಿಗಳಲ್ಲಿ ಜನತೆಗೆ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ ಈ ವರ್ಷ 42 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಾರಂಭವಾಗಬಹುದು ಎಂದು ಈಗಾಗಲೇ ಪೂರ್ವಸಿದ್ದತೆ ಮಾಡಿಕೊಳ್ಳಲಾಗಿದೆ ಇಲ್ಲಿಯವರೆಗೂ ಸಮಸ್ಯೆ ಇಲ್ಲ ಇನ್ನು ಮೇಲೆ ಕುಡಿಯುವ ನೀರಿನ ಸಮಸ್ಯೆ ಪ್ರಾರಂಭವಾದರೆ ಅಗತ್ಯಕ್ರಮಕೈಗೊಳ್ಳಲಾಗುವುದು
ಹೆಚ್.ವಿ.ಮರಿಸ್ವಾಮಿ, ಎಇಇ, ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೂಡ್ಲಿಗಿ.

ಕೂಡ್ಲಿಗಿ ತಾಲೂಕಿನಲ್ಲಿ ಬೇಸಗೆ ಬಂತೆಂದರೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದ್ದು ಕೊಳವೆಬಾವಿಗಳಲ್ಲಿ ಬರುವ ಪ್ಲೋರೈಡ್ ನೀರು ಸಹ ಸಿಗುವುದಿಲ್ಲ, ಮಹಿಳೆಯರಂತೂ ಪ್ರತಿದಿನ ನೀರು ತರುವುದೇ ಕೆಲಸವಾಗುತ್ತೆ, ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಯಿಂದ ಆದಷ್ಟು ಬೇಗ ನೀರನ್ನು ಕಾರಣ ಹೇಳದೆ ಜನತೆಗೆ ಸರಬರಾಜು ಮಾಡಬೇಕು ಎನ್ನುತ್ತಾರೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿಯ ರೈತ ಕೊಟ್ರೇಶ.