2013ರಿಂದ ಮತದಾರರ ಪರಿಷ್ಕರಣೆ ಅಕ್ರಮ: ತನಿಖೆಗೆ ಚು.ಆಯೋಗಕ್ಕೆ ಬಿಜೆಪಿ ದೂರು

ಬೆಂಗಳೂರು,ನ.19-ಮತದಾರರ ಪರಿಷ್ಕರಣೆಯಲ್ಲಿ ನಡೆದಿರುವ ಅಕ್ರಮ ಕುರಿತಂತೆ ಬಿಜೆಪಿ ಮತ್ತು ‌ಕಾಂಗ್ರೆಸ್ ನಡುವಣ ಜಟಾಪಟಿ ಮತ್ತಷ್ಟು ತೀವ್ರಗೊಂಡಿದ್ದು, 2013 ರಿಂದ ಮತದಾರರ ಪರಿಷ್ಕರಣೆಯಲ್ಲಿ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ನೇತೃತ್ವದ ನಿಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
2017ರಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ಚಿಲುಮೆ ಸಂಸ್ಥೆಗೆ ಮತದಾರರ ಪರಿಷ್ಕರಣೆಗೆ ಅನುಮತಿ ನೀಡಿತ್ತು. ಆದರೆ ಕಾಂಗ್ರೆಸ್ ನಾಯಕರು, ಬಿಜೆಪಿಯ ವಿರುದ್ಧ ತಾವು ಕಾರ್ಯಾದೇಶ ನೀಡಿದ್ದನ್ನು ಮರೆತು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಇಡೀ ಪ್ರಕರಣದ ಉನ್ನತ ಮಟ್ಟದ ತನಿಖೆಯನ್ನು 2013ರಿಂದ ನಡೆಸುವಂತೆ ಆಯೋಗಕ್ಕೆ ಮನವಿ ಮಾಡಿದೆ.
ಚಿಲುಮೆ ಸಂಸ್ಥೆಗೆ ಮತದಾರರ ಜಾಗೃತಿ ಮತ್ತು ಪರಿಷ್ಕರಣೆಯ ಕಾರ್ಯಕ್ಕೆ 2017-18ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಸರ್ಕಾರದಲ್ಲಿ ಅನುಮತಿ ನೀಡಲಾಗಿತ್ತು ಎಂದು ಬಿಜೆಪಿ ದೂರಿನಲ್ಲಿ ಉಲ್ಲೇಖಿಸಿದೆ.
24 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರವಾಗಿದೆ. ಕೈಬಿಟ್ಟಿರುವುದು ಕೇವಲ 6,73,422 ಮತದಾರರನ್ನು ಮಾತ್ರ. ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಬೇಕು ಎಂದು‌ ಮನವಿ ಮಾಡಿದೆ.
ಯಾವುದೇ ಖಾಸಗಿ ಸಂಸ್ಥೆ ಅಥವಾ ಯಾವುದೇ ಅಧಿಕಾರಿ ತಪ್ಪು ಮಾಡಿದ್ದರೂ ಅವರ ಬಗ್ಗೆ ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗ ಮುಂದಾಗಬೇಕು. ಬೆಂಗಳೂರು ಸೇರಿದಂತೆ ರಾಜ್ಯ ಎಲ್ಲ ಜಿಲ್ಲೆಗಳು ಎಲ್ಲೂ 224 ವಿಧಾನಸಭಾ ಕ್ಷೇತ್ರಗಳನ್ನು ಯಾವುದೇ ಮತದಾರರ ಹೆಸರು 2-3 ಬಾರಿ ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ವಿನಂತಿಸಿದೆ.
ಶಾಸಕ ರವಿ ಸುಬ್ರಮಣ್ಯ, ಎಂಎಲ್‌ಸಿ ಛಲವಾದಿ ನಾರಾಯಣ ಸ್ವಾಮಿ ಮತ್ತಿತರ ನಾಯಕರು ನಿಯೋಗದಲ್ಲಿದ್ದರು.