2000 ಮುಖಬೆಲೆಯ ನೋಟು ಸ್ವೀಕರಿಸದ ಪೆಟ್ರೋಲ್ ಬಂಕ್

ದಾವಣಗೆರೆ.ಜೂ.೩; ಭಾರತೀಯ ರಿಸರ್ವ್ ಬ್ಯಾಂಕ್ 2000 ಮುಖಬೆಲೆಯ ನೋಟುಗಳನ್ನು ಹಿಂತಿರುಗಿಸುವಂತೆ ಸೂಚನೆ ನೀಡಿದ್ದರ ಬೆನ್ನಲ್ಲೇ ದೇಶದ ಜನತೆ ತಮ್ಮಲ್ಲಿ ಇದ್ದಂತಹ 2000 ಮುಖಬೆಲೆಯ ನೋಟುಗಳನ್ನು ಬ್ಯಾಂಕುಗಳಿಗೆ ಹಿಂತಿರುಗಿಸುವ ಮೂಲಕ ತಮ್ಮ ಮೊತ್ತದ ಹಣ ವಾಪಾಸ್ಸು ಪಡೆಯುತ್ತಿದ್ದಾರೆ.ಸೆಪ್ಟಂಬರ್ 30ರವರೆಗೆ 2000 ಮುಖ ಬೆಲೆಯ ನೋಟುಗಳನ್ನು ಬ್ಯಾಂಕುಗಳು ವಾಪಾಸ್ಸು ಪಡೆಯುತ್ತವೆ ಎಂದು ಆರ್‍ಬಿಐ ತಿಳಿಸಿದೆ. ಅಲ್ಲದೇ ಯಾವುದೇ ಕಾರಣಕ್ಕೂ ಯಾವುದೇ ವಾಣಿಜ್ಯ ಕೇಂದ್ರಗಳು 2000 ಮುಖ ಬೆಲೆಯ ನೋಟನ್ನು ಪಡೆಯಲು ತಿರಸ್ಕಾರ ಮಾಡದಂತೆ ಸೂಚನೆ ನೀಡಿದೆ. ಆದರೆ, ದಾವಣಗೆರೆಯ ಕೆಲವೆಡೆ 2000 ಮುಖಬೆಲೆಯ ನೋಟುಗಳನ್ನು ಪಡೆಯಲು ಹಿಂದೇಟು ಹಾಕುತ್ತಿವೆ. ಮಾತ್ರವಲ್ಲದೇ ಅಂತಹ ನೋಟುಗಳನ್ನು ತಂದ ಗ್ರಾಹಕರ ಬಳಿ ವಾಗ್ವಾದಕ್ಕೆ ಇಳಿಯುತ್ತಿರುವುದಲ್ಲದೇ, ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿರುವ ಘಟನೆಗಳು ವರದಿಯಾಗಿವೆ. ಅಂತೆಯೇ ದಾವಣಗೆರೆಯ ಪೆಟ್ರೋಲ್ ಬಂಕ್‍ನಲ್ಲಿ ಬಹಿರಂಗವಾಗಿ ಸಾರ್ವಜನಿಕರಿಗೆ ಕಾಣುವಂತೆ 2000 ಮುಖಬೆಲೆಯ ನೋಟುಗಳನ್ನು ಇಲ್ಲಿ ಸ್ವೀಕರಿಸುವುದಿಲ್ಲ ಎನ್ನುವ ಫಲಕವನ್ನೇ ಹಾಕಿದ್ದಾರೆ. ನಗರದ ಶಾಮನೂರು ರಸ್ತೆಯಲ್ಲಿ ಬರುವ ಪೆಟ್ರೋಲ್ ಬಂಕ್‍ನಲ್ಲಿ ಈ ರೀತಿಯ ಫಲಕ ಅಂಟಿಸಲಾಗಿದೆ.ಈ ಕುರಿತಂತೆ ಗ್ರಾಹಕರು ಆರ್‍ಬಿಐ ಮಾರ್ಗಸೂಚಿ ಬಗ್ಗೆ ಹೇಳಿದರೆ, ನಮ್ಮಲ್ಲಿ ಯಾವುದೇ ರೀತಿಯ 2000 ಮುಖ ಬೆಲೆಯ ನೋಟುಗಳನ್ನು ಸ್ವೀಕರಿಸುವುದಿಲ್ಲ. ನಮ್ಮ ಮಾಲೀಕರು ಮಾತ್ರವಲ್ಲದೇ ನಮ್ಮ ಪೆಟ್ರೋಲ್ ಬಂಕಿನ ವ್ಯವಹಾರ ನೋಡಿಕೊಳ್ಳುವ ಲೆಕ್ಕ ಪರಿಶೋಧಕರೂ ಸಹ ಇದೇ ಮಾತನ್ನೇ ಹೇಳಿದ್ದಾರೆ ಎಂದು ಉಢಾಫೆಯಾಗಿ ಮಾತನಾಡಿ, ಕೆಲ ಗ್ರಾಹಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಬಗ್ಗೆ ಮಾಲೀಕರು ಹಾಗೂ ಲೆಕ್ಕ ಪರಿಶೋಧಕರನ್ನು ಕೇಳಿದರೆ ನಾವು ತೀರ್ಮಾನ ಮಾಡಿರುವುದೇ ಅಂತಿಮ. ನಮ್ಮಲ್ಲಿ 2000 ಮುಖ ಬೆಲೆಯ ನೋಟು ಪಡೆಯುವುದಿಲ್ಲ. ಯಾರಿಗೆ ಬೇಕಾದರೂ ಹೇಳಿಕೊಳ್ಳಿ, ಏನು ಬೇಕಾದರೂ ಮಾಡಿ ಕೊಳ್ಳಿ, ನಮಗೆ ಯಾರೂ ಏನು ಮಾಡಲು ಆಗುವುದಿಲ್ಲ. ನಾವು ಕೂಡ ಯಾರೇ ಬಂದರೂ ನೋಡಿ ಕೊಳ್ಳುತ್ತೇವೆ ಎನ್ನುವ ಗೂಂಡಾಗಿರಿಯ ಪ್ರವೃತ್ತಿಯಿಂದ ಗ್ರಾಹಕರನ್ನೇ ದಬಾಯಿಸಿ ಕಳಿಹಿಸುತ್ತಾರೆ.ಕಾರಣ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು, ಬ್ಯಾಂಕಿನ ಅಧಿಕಾರಿಗಳು, ತಕ್ಷಣವೇ ಕ್ರಮ ಕೈಗೊಂಡು, ಈ ರೀತಿ ಗ್ರಾಹಕರೊಂದಿಗೆ ಗೂಂಡಾಗಿರಿ ಪ್ರವೃತ್ತಿ ಮಾಡುವ, ಹಲ್ಲೆ ಮಾಡಲು ಮುಂದಾಗುವ ಪ್ರವೃತ್ತಿಯನ್ನು ಬಿಟ್ಟು ಗ್ರಾಹಕರೊಡನೆ ಸೌಜನ್ಯವಾಗಿ ವರ್ತಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಇಲ್ಲವಾದಲ್ಲಿ ಇಂತಹವರಿಗೆ ನಾವುಗಳೇ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.