20 ಸಾವಿರ ಗಡಿದಾಟಿದ ಸೋಂಕು

ನವದೆಹಲಿ, ಜು.೧೪- ದೇಶದಲ್ಲಿ ದಿನದಿಂದದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ಏರುಮುಖದಲ್ಲಿದೆ. ಕಳೆದ ಹಲವು ತಿಂಗಳುಗಳ ಬಳಿಕ ಇದೇ ಮೊದಲ ಬಾರಿಗೆ ಸೋಂಕಿನ ಸಂಖ್ಯೆ ೨೦ ಸಾವಿರ ಗಡಿದಾಟಿದ್ದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸೋಂಕು ಸಂಖ್ಯೆ ಏರಿಕೆಯಾಗಿದ್ದು ಸಾವಿನ ಸಂಖ್ಯೆ ತುಸು ಕಡಿಮೆಯಾಗಿದ್ದು ಹೊಸದಾಗಿ ೨೦,೧೩೯ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೧೬,೪೫೨ ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಇದೇ ಅವಧಿಯಲ್ಲಿ ೩೮ ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಸೋಂಕು ದಿಢೀರನೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ.೫.೧೦ಕ್ಕೆ ಹೆಚ್ಚಳವಾಗಿದೆ. ಜೊತೆಗೆ ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ೧,೩೬,೦೭೬ಕ್ಕೆ ಆಧಿಕವಾಗಿದೆ.
ಇದುವರೆಗೂ ಸೋಂಕಿನ ಒಟ್ಟು ಸಂಖ್ಯೆ ೪.೩೪ ಕೋಟಿಗೆ ಹೆಚ್ಚಳವಾಗಿದ್ದು ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾದವರ ಸಂಖ್ಯೆ ೩೦,೨೮,೩೫೩ಕ್ಕೆ ಹೆಚ್ಚಳವಾಗಿದೆ. ಇಲ್ಲಿಯ ತನಕ ಸೋಂಕಿನಿಂದ ಸಾವನಪ್ಪಿದವರ ಸಂಖ್ಯೆ ೫,೨೫,೮೫೭ ಕ್ಕೆ ಹೆಚ್ಚಳವಾಗಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೩,೪೪,೭೧೪ ಡೋಸ್ ಲಸಿಕೆ ಹಾಕಿದ್ದು ಇಲ್ಲಿಯ ತನಕ ಲಸಿಕೆ ಪಡೆದವರ ಸಂಖ್ಯೆ ೧೯೦,೨೭,೨೭೫೯ ಡೋಸ್ ಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ೩,೯೧,೭೭೧ ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯ ತನಕ ೮೬,೮೧ ಕೋಟಿ ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕೊರೊನಾ ಸೋಂಕಿನ ದಿನದ ಪಾಸಿಟಿವಿಟಿ ಪ್ರಮಾಣ ಶೇ.೫.೧೦ ರಷ್ಟು ಇದ್ದರೆ ವಾರದ ಸರಾಸರಿ ಪ್ರಮಾಣ ಶೇ.೪.೩೭ ರಷ್ಟು ಇದೆ. ಅಲ್ಲದೆ, ಸೋಂಕಿನ ಒಟ್ಟಾರೆ ಪ್ರಮಾಣ ಶೇ.೦.೩೧ಕ್ಕೆ ಏರಿಕೆಯಾಗಿದೆ.
ಸೋಂಕು ಹೆಚ್ಚಳದ ಹಿನ್ನಲೆಯಲ್ಲಿ ಸೋಂಕಿನ ಚೇತರಿಕೆ ಪ್ರಮಾಣ ಶೇ.೯೮.೪೯ಕ್ಕೆ ಕುಸಿತ ಕಂಡಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.