20 ಸಾವಿರ ಕೋಟಿ ಬೆಳೆ ಸಾಲ ಗುರಿ

ಬೆಂಗಳೂರು,ಮೇ ೩೧- ಸಹಕಾರ ಬ್ಯಾಂಕುಗಳ ಮೂಲಕ ರೈತರಿಗೆ ಈ ವರ್ಷ ೨೦,೮೧೦ ಕೋಟಿ ರೂ.ಗಳ ಬೆಳೆ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ವಿಕಾಸಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ೩೦ ಲಕ್ಷ ರೈತರಿಗೆ ಸಾಲ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಹಾಗೆಯೇ, ೨೦,೮೧೦ ಕೋಟಿ ರೂ. ಸಾಲ ವಿತರಿಸುವ ಗುರಿಯನ್ನು ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‌ಗಳಿಗೆ ನೀಡಿದ್ದೇವೆ ಎಂದರು.
ಕಳೆದ ವರ್ಷ ೨೦೨೦-೨೦೨೧ನೇ ಸಾಲಿನಲ್ಲಿ ೧೫,೪೦೦ ಕೋಟಿ ರೂ. ಸಾಲ ವಿತರಣೆಯ ಗುರಿ ನೀಡಿದ್ದೆವು. ಗುರಿ ಮೀರಿ ೧೭,೯೦೧ ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು.
ಈ ಸಾಲ ವಿತರಣೆಯಲ್ಲಿ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳು ಸೇರಿವೆ ಎಂದರು.
ಕಳೆದ ವರ್ಷ ಐದಾರು ಡಿಸಿಸಿ ಬ್ಯಾಂಕುಗಳು ಸಾಲ ವಿತರಣೆಯಲ್ಲಿ ನಿಗದಿತ ಗುರಿ ಸಾಧಿಸಿಲ್ಲ. ಆ ಬ್ಯಾಂಕುಗಳಿಗೂ ಈ ವರ್ಷ ಗುರಿ ಸಾಧಿಸುವಂತೆ ಸೂಚನೆ ನೀಡಿದ್ದೇನೆ. ಲಾಕ್‌ಡೌನ್ ಮುಗಿದ ಬಳಿಕ ಎಲ್ಲ ಡಿಸಿಸಿ ಬ್ಯಾಂಕುಗಳಿಗೂ ಭೇಟಿ ಕೊಡುತ್ತೇನೆ ಎಂದವರು ಹೇಳಿದರು.
ಜೂ ೭ರ ಬಳಿಕ ಲಾಕ್‌ಡೌನ್ ಬೇಡ ಎಂದು ಹೇಳಿದಕ್ಕೆ ತಮ್ಮನ್ನು ವಿಲ್ಲನ್ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಮೈಸೂರು ಜಿಲ್ಲೆಯ ೧೧ ಶಾಸಕರ ಅಭಿಪ್ರಾಯ ಆಲಿಸಿ ಅನ್‌ಲಾಕ್ ಬಗ್ಗೆ ಹೇಳಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಜಿಲ್ಲಾಧಿಕಾರಿ ಮತ್ತು ಸಂಸದರ ನಡುವಿನ ಜಟಾಪಟಿಗೆ ಪ್ರತಿಕ್ರಿಯಿಸಿದ ಅವರು, ಇಬ್ಬರನ್ನೂ ಕೂರಿಸಿಕೊಂಡು ಮಾತನಾಡಿದ್ದೇನೆ. ಈ ಸಂದರ್ಭದಲ್ಲಿ ಇದೆಲ್ಲ ಬೇಡ ಎಂದು ಹೇಳಿದ್ದೇನೆ. ನಮ್ಮ ಆಧ್ಯತೆ ಕೊರೊನಾ ಮುಕ್ತ ಮಾಡುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಬೆಳ್ಳಿ ಪ್ರಕಾಶ್ ಉಪಸ್ಥಿತರಿದ್ದರು.