20 ಲಕ್ಷ ಹಣ ಪಡೆದು ಮರಳಿ ನೀಡದೆ ನಂಬಿಕೆ ದ್ರೋಹ ಮಾಡಿದ ಗೆಳೆಯ

ಕಲಬುರಗಿ,ಜು.13-ವ್ಯಕ್ತಿಯೊಬ್ಬ ತನ್ನ ಗೆಳೆಯನ ಬಳಿ 20 ಲಕ್ಷ ಹಣ ಪಡೆದು ಸಕಾಲಕ್ಕೆ ಆತನಿಗೆ ಮರಳಿ ನೀಡದೆ ನಂಬಿಕೆ ದ್ರೋಹ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಿವೃತ್ತ ಸರ್ಕಾರಿ ನೌಕರರಾಗಿರುವ ಹಳೇ ಜೇವರ್ಗಿ ರಸ್ತೆಯ ಗಣೇಶ ನಗರದ ಭಾಗಪ್ಪ ರಾಂಪುರೆ (68) ಎಂಬುವವರ ಬಳಿ ಅವರ ಗೆಳೆಯ, ಗುತ್ತಿಗೆದಾರರಾದ ನಾಮದೇವ ಎಂಬುವವರು ಕಟ್ಟಡಗಳನ್ನು ಕಟ್ಟಲೆಂದು 20 ಲಕ್ಷ ರೂಪಾಯಿ ಕೈಗಡ ನೀಡುವಂತೆ ಕೇಳಿದ್ದಾರೆ. ಆಗ ಭಾಗಪ್ಪ ರಾಂಪುರೆ ಅವರು ಮಾಣಿಕೇಶ್ವರಿ ಕಾಲೋನಿಯ ಸಂತೋಷ ಮತ್ತು ಬಸವರಾಜ ಬೂದಿಹಾಳ ಅವರ ಸಮ್ಮುಖದಲ್ಲಿ ಕರಾರು ಪತ್ರ ಬರೆದುಕೊಂಡು 20 ಲಕ್ಷ ರೂ.ನೀಡಿದ್ದಾರೆ. ಆಗ ನಾಮದೇವ ಅವರು ಕರಾರು ಪತ್ರದ ಒಪ್ಪಂದದಂತೆ ಹಣ ಕೊಡುವುದಾಗಿ ಹೇಳಿ ಹಣ ಮರಳಿ ಕೊಡುವವರೆಗೆ 10 ಲಕ್ಷ ರೂಗಳ 2 ಚೆಕ್ ನಿಮ್ಮ ಬಳಿ ಇಟ್ಟುಕೊಳ್ಳುವಂತೆ ಭಾಗಪ್ಪ ರಾಂಪುರೆ ಅವರಿಗೆನೀಡಿದ್ದಾರೆ. ಕರಾರುಪತ್ರದ ಒಪ್ಪಂದಂತೆ ನಿಗದಿಯಾದ ದಿನಾಂಕದಂದು ನಾಮದೇವ ಅವರು ಹಣ ಮರಳಿ ನೀಡದೇ ಇರುವ ಹಿನ್ನೆಲೆಯಲ್ಲಿ ಭಾಗಪ್ಪ ಅವರು ಹಣ ಕೇಳಲು ಹೋಗಿದ್ದಾರೆ. ಆಗ ನಾಮದೇವ ನಿಮಗೆ ಕೊಟ್ಟಿರುವ ಚೆಕ್‍ಗಳನ್ನು 15-15 ದಿನಗಳಲ್ಲಿ ಬ್ಯಾಂಕಿಗೆ ಹಾಕಿ ಹಣ ಬಿಡುಗಡೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಆಗ ಭಾಗಪ್ಪ ಅವರು ಬ್ಯಾಂಕಿಗೆ ಚೆಕ್ ಹಾಕಲು ಹೋದಾಗ ಬ್ಯಾಂಕ್‍ನವರು ಖಾತೆದಾರ ನಾಮದೇವ ಅವರು ಹಣ ಬಿಡುಗಡೆ ಮಾಡದಂತೆ ತಿಳಿಸಿದ್ದಾರೆ ಎಂದಿದ್ದಾರೆ. ಇದರಿಂದ ನೊಂದ ಭಾಗಪ್ಪ ಅವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ನಾಮದೇವ ವಿರುದ್ಧ ದೂರು ಸಲ್ಲಿಸಿದ್ದಾರೆ. ನಾಮದೇವ ಅವರು 20 ಲಕ್ಷ ಪಡೆದು ಒಪ್ಪಂದದಂತೆ ಮರಳಿ ನೀಡದೆ ನಂಬಿಕೆ ದ್ರೋಹ ಮಾಡಿದ್ದು, ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸ್ಟೇಷನ್ ಬಜಾರ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.