20 ಮಕ್ಕಳಿಗೆ ಝೈಡುಸ್ ಕ್ಯಾಡಿಲಾದ ಲಸಿಕೆ ನೀಡಿಕೆ

ಬೆಂಗಳೂರು, ಮೇ ೨೦- ಮುಂಬರುವ ಸಂಭಾವ್ಯ ಕೊರೊನಾ ಸೋಂಕಿನ ಮೂರನೇ ಅಲೆಗೆ ಈಗಾಗಲೇ ಸಿದ್ಧತೆ ನಡೆದಿದ್ದು, ಮುಖ್ಯವಾಗಿ ಮಕ್ಕಳಿಗೂ ಕೂಡ ಇದು ತೀವ್ರ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಇದೀಗ ಝೈಡುಸ್ ಕ್ಯಾಡಿಲಾ ತನ್ನ ವ್ಯಾಕ್ಸಿನ್‌ನ ಮೂರನೇ ಹಂತದ ವೈದ್ಯಕೀಯ ಪ್ರಯೋಗ ಆರಂಭಿಸಿದ್ದು, ಇದರ ಭಾಗವಾಗಿ ಕರ್ನಾಟಕದಲ್ಲಿ ೨೦ ಮಕ್ಕಳು ಇದರಲ್ಲಿ ಯಶಸ್ವಿಯಾಗಿ ಭಾಗಿಯಾಗಿದ್ದಾರೆ.
ಕರ್ನಾಟಕದಲ್ಲಿ ಒಟ್ಟು ೧೭೦೦ ಕಾರ್ಯಕರ್ತರು ವ್ಯಾಕ್ಸಿನ್‌ನ ಮೂರನೇ ಹಂತದ ವೈದ್ಯಕೀಯ ಪ್ರಯೋಗದಲ್ಲಿದ್ದು, ಭಾಗಿಯಾಗಿದ್ದು ಇದರಲ್ಲಿ ೨೦ ಮಂದಿ ೧೨ರಿಂದ ೧೮ರ ಒಳಗಿನ ಹರೆಯದ ಮಕ್ಕಳಾಗಿದ್ದಾರೆ. ಇದರಲ್ಲಿ ಯಾವ ಮಕ್ಕಳಿಗೂ ಅಡ್ಡಪರಿಣಾಮಗಳಾಗಿಲ್ಲ, ಎಲ್ಲರೂ ಮೊದಲ ಹಂತದ ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಭಾರತದಾದ್ಯಂತ ೪೩ ಕಡೆಗಳಲ್ಲಿ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗಿದ್ದು, ೨೦ರಿಂದ ೩೦ ಮಕ್ಕಳು ಭಾಗಿಯಾಗಿದ್ದರು ಎಂದು ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯ ನಿರ್ದೇಶಕ ಡಾ. ಅಮಿತ್ ಭಾಟೆ ತಿಳಿಸಿದ್ದಾರೆ.