2.53 ಲಕ್ಷ ಮನೆಗಳ ನಿರ್ಮಾಣ


ಬೆಂಗಳೂರು, ಸೆ. ೧೫- ರಾಜ್ಯದಲ್ಲಿ ವಸತಿರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ೨೦೧೯-೨೦ ಮತ್ತು ೨೦೨೦-೨೧ರ ಆರ್ಥಿಕ ವರ್ಷದಲ್ಲಿ ಪ್ರಗತಿಯಲ್ಲಿದ್ದ ಮನೆಗಳ ಪೈಕಿ ೨.೫೩ ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ವಿಧಾನಪರಿಷತ್‌ನಲ್ಲಿಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ನಗರ ಮತ್ತು ಗ್ರಾಮೀಣ ಪ್ರದೇಶ, ಬಸವವಸತಿ ಯೋಜನೆ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ಬೆಂಗಳೂರು ನಗರದಲ್ಲಿ ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಹೆಚ್.ಎಂ. ರಮೇಶ್‌ಗೌಡ ಅವರ ಪರವಾಗಿ ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿವಿಧ ಯೋಜನೆಯ ಮನೆಗಳ ಪ್ರಗತಿಗನುಗುಣವಾಗಿ ಅರ್ಹ ಫಲಾನುಭವಿಗಳಿಗೆ ಇದುವರೆಗೂ ೪,೪೩೩.೦೯ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಕಳೆದ ೧೫-೨೦ ವರ್ಷಗಳಿಂದ ವಸತಿ ಯೋಜನೆಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಇದುವರೆಗೂ ಪೂರ್ಣಗೊಳಿಸಿಲ್ಲ. ಹೀಗಾಗಿ ಬಾಕಿ ಇರುವ ಎಲ್ಲ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆ ಸರ್ಕಾರ, ಈ ಸರ್ಕಾರ ಮಾಡಿಲ್ಲ ಎನ್ನುವ ಬದಲು ವಸತಿರಹಿತರಿಗೆ ಹಾಗೂ ಅರ್ಹರಿಗೆ ಸೌಲಭ್ಯ ಕಲ್ಪಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳಿಗೆ ಇಂದಿರಾ ಮನೆ ಆಪ್ ಮುಖಾಂತರ ಜಿಪಿಎಸ್ ಮಾಡಲಾದ ಮನೆಗಳ ಭೌತಿಕ ಪ್ರಗತಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದ ಅವರು, ಪ್ರಗತಿಯಲ್ಲಿರುವ ಮನೆಗಳಲ್ಲಿ ಅನರ್ಹ ಫಲಾನುಭವಿಗಳ ಆಯ್ಕೆ ಕಂಡು ಬಂದಿದೆ. ಅಂತಹ ಕಡೆ ಅನುದಾನ ದುರ್ಬಳಕೆಯಾಗದಂತೆ ತಡೆ ಹಿಡಿಯುವ ಉದ್ದೇಶದಿಂದ ಇಂದಿರಾ ಮನೆ ಮೊಬೈಲ್ ಆಪ್‌ಗೆ ಜಿಪಿಎಸ್ ಅಳವಡಿಸಲಾಗಿದೆ ಎಂದರು.
೨೦೧೮-೧೯ ರಿಂದ ೨೦೨೦-೨೧ನೇ ಸಾಲಿಗೆ ವಿವಿಧ ವಸತಿ ಯೋಜನೆಗಳಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟಾರೆಯಾಗಿ ೧೦,೩೬೧.೪೦ ಬಿಡುಗಡೆ ಮಾಡಲಾಗಿದ್ದು, ಇದುವರೆಗೂ ೯,೭೩೪.೦೩ ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನುಳಿದ ಅನುದಾನವನ್ನು ಹಂತ ಹಂತವಾಗಿ ಖರ್ಚು ಮಾಡಲಾಗುತ್ತಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ೨೦೧೮-೧೯ ರಿಂದ ೨೦೨೦-೨೧ನೇ ಸಾಲಿಗೆ ೯,೯೫೮ಮನೆಗಳನ್ನು ಮಂಜೂರು ಮಾಡಿ ಕಾಮಗಾರಿ ಆದೇಶ ಪತ್ರ ನೀಡಲಾಗಿದೆ. ಇದೇ ಅವಧಿಯಲ್ಲಿ ೩೦,೨೦೦ ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.