2 ಸಾವಿರ ಮುಖಬೆಲೆಯ ನೋಟು ಚಲಾವಣೆ ರದ್ದು:ಸೆ.30 ರ ತನಕ ವಿನಿಮಯಕ್ಕೆ ಅವಕಾಶ: ಆರ್ ಬಿಐ

ಮುಂಬೈ,ಮೇ.19- ದೇಶದಲ್ಲಿ 2 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ತಕ್ಷಣದಿಂದ ಜಾರಿಗೆ ಬರುವಂತೆ ಹಿಂದಕ್ಕೆ ಪಡೆದಿದೆ.ಇನ್ನು ಮುಂದೆ ಯಾವುದೇ ಬ್ಯಾಂಕ್‌ಗಳು 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡದಂತೆ ಸೂಚನೆ ನೀಡಿದೆ.2 ಸಾವಿರ ರೂಪಾಯಿ ಮುಖಬೆಲೆಯ ಚಲಾವಣೆಯನ್ನು ಸ್ಥಗಿತ ಮಾಡಲಾಗಿದೆ. ಆದರೆ ಅವುಗಳ ಕಾನೂನಿನ ಮಾನ್ಯತೆ ಮುಂದುವರೆಯಲಿದ್ದು, ಇದೇ 23 ರಿಂದ ಬ್ಯಾಂಕ್‌ಗಳಿಗೆ ತೆರಳಿ ತಮ್ಮಲ್ಲಿರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಬದಲು ಮಾಡಿಕೊಳ್ಳುವಂತೆ ಆರ್‌ಬಿಐ ಸೂಚಿಸಿದೆ.ಹಣ ಬದಲಾವಣೆ ಮಾಡಿಕೊಳ್ಳುವ ಸಮಯದಲ್ಲಿ ಒಂದು ಬಾರಿಗೆ 20 ಸಾವಿರ ರೂಪಾಯಿಗೆ ಮೀರದಂತೆ  ಬದಲಾವಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.ಎಲ್ಲಾ ಬ್ಯಾಂಕ್‌ಗಳು 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಠೇವಣಿ ಮಾಡಿಕೊಳ್ಳುವುದು ಅಥವಾ ಅದಕ್ಕೆ ಬದಲಾಗಿ ಹಣ ನೀಡುವುದನ್ನು ಇದೇ ಸೆಪ್ಟಂಬರ್ 30 ರ ತನಕ ಮಾಡುವಂತೆ ಸೂಚನೆ ನೀಡಿದೆ.ದೇಶದಲ್ಲಿ 2016 ರ ನವಂಬರ್‌ನಲ್ಲಿ 2 ಸಾವಿರ ರೂಪಾಯಿಯ ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಗಿತ್ತು. ಅಲ್ಲಿಯ ತನಕ ಚಾಲ್ತಿಯಲ್ಲಿದ್ದ 500 ಮತ್ತು 1 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿ ಹೊಸದಾಗಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಪರಿಚಯಿಸಲಾಗಿತ್ತು.

  • ದೇಶದಲ್ಲಿ 2 ಸಾವಿರ ಮುಖಬೆಲೆಯ ನೋಟು ಚಲಾವಣೆ ರದ್ದು
  • ಇದೇ 23 ರಿಂದ ಬ್ಯಾಂಕ್ ಗಳಲ್ಲಿ ಬದಲಾವಣೆಗೆ ಅವಕಾಶ
  • ಸೆಪ್ಡಂಬರ್ 30 ರವೆಗೆ ಬದಲು ಮಾಡಿಕೊಳ್ಳಲು ಅನುವು
  • ಯಾವುದೇ ಬ್ಯಾಂಕ್ ಇನ್ನು ಮುಂದೆ 2 ಸಾವಿರ ನೋಟು ವಿತರಿಸದಂತೆ ಸೂಚನೆ