2 ಲಕ್ಷ ಲಂಚ ಮಹಿಳಾ ಪಿಎಸ್ಐ ಮುಖ್ಯ ಪೇದೆ ಎಸಿಬಿ ಬಲೆಗೆ

ಬೆಂಗಳೂರು, ಜ.12-ಕಳವು ಮಾಡಿದ ಮೊಬೈಲ್​ಗಳನ್ನು ಸ್ವೀಕರಿಸುತ್ತಿದ್ದ ವ್ಯಕ್ತಿಯಿಂದ 2 ಲಕ್ಷ ರೂಗಳ ಲಂಚ ಕೇಳಿದ ಮಹಿಳಾ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ಹಾಗೂ ಮುಖ್ಯ ಪೇದೆಯೊಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ.
ಹಣದ ಸಮೇತ ಓಡಿ ಹೋಗುತ್ತಿದ್ದ ಮತ್ತೋರ್ವ ಪೇದೆ ಕಾಲು ಮುರಿದು ಕೊಂಡಿದ್ದಾನೆ.
ಬೈಯ್ಯಪ್ಪನ ಹಳ್ಳಿ ಠಾಣೆಯ ​ಪಿಎಸ್ ಐ ಸೌಮ್ಯ, ಮುಖ್ಯ ಪೇದೆ ಜೆ.ಪಿ. ರೆಡ್ಡಿ ಎಸಿಬಿ ಬಲೆಗೆ ಬಿದ್ದವರು. ಈ ಇಬ್ಬರಿಗೆ ಎಸಿಬಿ ದಾಳಿ ವಿಚಾರ ತಿಳಿಯುತ್ತಿದ್ದಂತೆ ಹಣವನ್ನು ಮತ್ತೋರ್ವ ಪೇದೆ ಕುಮಾರ್​ ಎಂಬಾತನಿಗೆ ಹಸ್ತಾಂತರಿಸಿದ್ದು, ತಪ್ಪಿಸಿಕೊಳ್ಳುವ ಭರದಲ್ಲಿ ಕುಮಾರ್ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾನೆ.
ನಡೆದಿದ್ದೇನು ?
ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿ‌ಯಿಂದ ವಸ್ತುಗಳನ್ನು ಸ್ವೀಕರಿಸುತ್ತಿದ್ದ ವ್ಯಕ್ತಿಗೆ, ಪಿಎಸ್ಐ ಸೌಮ್ಯ ಹಾಗೂ ಮುಖ್ಯಪೇದೆ ರೆಡ್ಡಿ 2 ಲಕ್ಷ ರೂ.ಲಂಚ ಕೇಳಿದ್ದರು.ಇದನ್ನು ವ್ಯಕ್ತಿಯು ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದಿದ್ದು ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಎಸಿಬಿ ಎಸಿಪಿ ಪ್ರತಾಪ್ ರೆಡ್ಡಿ ನೇತೃತ್ವದ ತಂಡ ಬಲೆಗೆ ಕೆಡವಿದೆ.
ಎಸಿಬಿ ದಾಳಿ ತಿಳಿಯುತ್ತಿದ್ದಂತೆ ಪೇದೆ ಕುಮಾರ್ ಹಣದ ಸಮೇತ ಪರಾರಿಯಾಗಲು ಠಾಣೆ ಕಟ್ಟಡದ ಮೊದಲ ಮಹಡಿಯಿಂದ ಹಾರಿ ಕಾಲು ಮುರಿದುಕೊಂಡಿದ್ದಾನೆ. ಸೌಮ್ಯ ಹಾಗೂ ರೆಡ್ಡಿಯನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.