ಸಂಜೆವಾಣಿ ವಾರ್ತೆ
ಬಳ್ಳಾರಿ,ಏ.11: ಸಾರ್ವತ್ರಿಕ ವಿಧಾನಸಭೆ ಚುನಾವಣೆ 2023 ರ ಅಂಗವಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಜಿಲ್ಲೆಯ ವಿವಿಧ ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ. ಸೋಮವಾರದಂದು ಒಟ್ಟು 2 ಲಕ್ಷ ರೂ. ನಗದು ಹಣ ಮತ್ತು 19,011 ರೂ. ಮೌಲ್ಯದ 44.46 ಲೀಟರ್ ಮದ್ಯ ವಶಪಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
95-ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ತೋರಣಗಲ್ಲಿನ ವಿಜಯನಗರ ವಿಮಾನ ನಿಲ್ದಾಣದ ಹತ್ತಿರ ಚೆಕ್‍ಪೋಸ್ಟ್ ಬಳಿ ಎಸ್‍ಎಸ್‍ಟಿ ತಂಡವು ತಪಾಸಣೆ ವೇಳೆ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 2 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪರಿಶೀಲನೆಗಾಗಿ ಸಮಿತಿಯ ಮುಂದೆ ಹಾಜರುಪಡಿಸಲಾಗಿರುತ್ತದೆ.
ಅಬಕಾರಿ ಇಲಾಖೆಯಿಂದ ರೂ.18,589 ಮೌಲ್ಯದ 43.38 ಲೀಟರ್ ಮದ್ಯ ಮತ್ತು ಪೊಲೀಸ್ ಇಲಾಖೆಯಿಂದ ರೂ.422 ಬೆಲೆಯ 1.08 ಲೀಟರ್ ಮದ್ಯ ಸೇರಿದಂತೆ ಒಟ್ಟು 44.46 ಲೀಟರ್ (ರೂ.19,011 ಮೌಲ್ಯದ) ಮದ್ಯ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯಾದ್ಯಂತ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿವಿಧ ತಂಡಗಳನ್ನು ರಚಿಸಲಾಗಿದ್ದು, ಒಟ್ಟು 43 ಫ್ಲೈಯಿಂಗ್ ಸ್ಕ್ವಾಡ್, 27 ಎಸ್‍ಎಸ್‍ಟಿ ತಂಡ ಹಾಗೂ 7 ಅಬಕಾರಿ ತಂಡಗಳು ಈಗಾಗಲೇ ಕಾರ್ಯಪ್ರವೃತ್ತವಾಗಿ ತಪಾಸಣೆ ನಡೆಸುತ್ತಿವೆ.
ಎಸ್‍ಎಸ್‍ಟಿ ತಂಡವು ವಸೂಲಿ ಮಾಡಿದ 2 ಲಕ್ಷ ರೂ.ಗಳನ್ನು ನ್ಯಾಯಾಲಯದ ನಿರ್ದೇಶನದಂತೆ ಚುನಾವಣಾ ಅಧಿಕಾರಿಗಳ ಸಮಕ್ಷಮದಲ್ಲಿ ಖಜಾನೆಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.