2 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದಿಸಲು ಕೇಂದ್ರದ ನಿರ್ಧಾರ

ನವದೆಹಲಿ,ಅ.೧೩- ದೇಶದಲ್ಲಿ ತಲೆದೋರಿರುವ ಕಲ್ಲಿದ್ದಲು ಅಭಾವಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಕೇಂದ್ರ ಸರ್ಕಾರ ಇನ್ನೊಂದು ವಾರದಲ್ಲಿ ಪ್ರತಿದಿನ ೨ ಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆಗೆ ಮುಂದಾಗಿದೆ.
ವಿವಿಧ ರಾಜ್ಯಗಳ ವಿದ್ಯುತ್ ಉತ್ಪಾದನಾ ಘಟಕಗಳಿಂದ ಕಲ್ಲಿದ್ದಲು ಬೇಡಿಕೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಕಲ್ಲಿದ್ದಲು ಉತ್ಪಾದನೆಗೆ ಕೇಂದ್ರಸರ್ಕಾರ ಒತ್ತು ನೀಡಿದೆ.
ದೇಶದ ಹಲವೆಡೆ ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆ ಕುಂಟಿತಗೊಂಡಿತ್ತು, ಈ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ ಬೇಡಿಕೆ ಪೂರೈಸಲು ಇನ್ನೊಂದು ವಾರದಲ್ಲಿ ಕಲ್ಲಿದ್ದಲು ಉತ್ಪಾದನೆಗೆ ಆಧ್ಯತೆ ನೀಡಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಐದು ದಿನಗಳಿಗೆ ಸಾಕಾಗುವಷ್ಟು ಕಲ್ಲಿದ್ದಲನ್ನು ರಾಜ್ಯಗಳಿಗೆ ಮತ್ತು ವಿದ್ಯುತ್ ಉತ್ಪಾದಿಸುವ ಕಂಪನಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ಕಲ್ಲಿದ್ದಲು ಕೊರತೆ ಎದುರಾಗಿಲ್ಲ. ಇನ್ನೊಂದು ತಿಂಗಳೊಳಗಾಗಿ ಸಹಜ ಸ್ಥಿತಿಗೆ ಮರಳಲಿದೆ.
ಜನವರಿ ತಿಂಗಳಿನಲ್ಲಿ ಕಲ್ಲಿದ್ದಲು ಸಚಿವಾಲಯ ಎಲ್ಲ ರಾಜ್ಯಗಳಿಗೂ ಪತ್ರ ಬರೆದು ಕಲ್ಲಿದ್ದಲು ಶೇಖರಿಸಿಟ್ಟುಕೊಳ್ಳುವಂತೆ ಸೂಚಿಸಲಾಗಿತ್ತು.
ರಾಜಸ್ತಾನ, ಪಶ್ಚಿಮ ಬಂಗಾಳ, ಜಾರ್ಖಂಡ್ ರಾಜ್ಯಗಳಲ್ಲಿ ತಮ್ಮದೇ ಕಲ್ಲಿದ್ದಲು ಗಣಿಯನ್ನು ಹೊಂದಿದೆ. ಹಾಗಾಗಿ, ಈ ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆಯುಂಟಾಗಿಲ್ಲ.
ಕೋವಿಡ್ ಮತ್ತು ದೇಶದ ಹಲವೆಡೆ ಸುರಿದ ಧಾರಾಕಾರ ಮಳೆಯಿಂದಾಗಿ ಕಲ್ಲಿದ್ದಲು ಸಮರ್ಪಕ ರೀತಿಯಲ್ಲಿ ಸರಬರಾಜಾಗಿಲ್ಲ ಎಂಬ ದೂರುಗಳು ಹಲವು ರಾಜ್ಯಗಳಿಂದ ಬಂದಿದ್ದವು.
ಕಲ್ಲಿದ್ದಲು ಆಮದಿನಲ್ಲಿ ಶೇ. ೧೨ ರಷ್ಟು ಇಳಿಕೆಯಾಗಿದೆ. ಕೆಲವೊಂದು ಕಂಪನಿಗಳ ಕಲ್ಲಿದ್ದಲ ದರವೂ ಹೆಚ್ಚಳವಾಗಿದೆ. ಹೀಗಾಗಿ ಹಲವು ರಾಜ್ಯಗಳು ಕಲ್ಲಿದ್ದಲು ಹಣ ಬಾಕಿ ಉಳಿಸಿಕೊಂಡಿವೆ. ಮೂಲಗಳ ಪ್ರಕಾರ ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಗಾಳ ಮತ್ತು ತಮಿಳುನಾಡು ರಾಜ್ಯಗಳು ಕೋಲ್ ಇಂಡಿಯಾಗೆ ೨೦ ಸಾವಿರ ಕೋಟಿ ರೂ.ಗಳನ್ನು ಪಾವತಿ ಮಾಡಬೇಕಾಗಿದೆ.
೪೦ ಹೊಸ ಕಲ್ಲಿದ್ದಲು ಗಣಿ ಹರಾಜು
ಕಲ್ಲಿದ್ದಲು ಸಚಿವಾಲಯ ೪೦ ಹೊಸ ಕಲ್ಲಿದ್ದಲು ಗಣಿಯನ್ನು ಹರಾಜು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ೪೦ ಗಣಿಗಳ ಪೈಕಿ ೨೧ ಗಣಿಗಳು ಕಲ್ಲಿದ್ದಲು ಸಚಿವಾಲಯ ವ್ಯಾಪ್ತಿಗೆ ಒಳಪಟ್ಟಿದೆ.
ಈ ಬಗ್ಗೆ ಸಚಿವಾಲಯದಿಂದ ಅಧಿಕೃತ ಹೇಳಿಕೆ ಹೊರ ಬಿದ್ದಿದ್ದು, ಈ ಹಿಂದೆ ೨೮ ಕಲ್ಲಿದ್ದಲು ಗಣಿಗಳನ್ನು ಯಶಸ್ವಿಯಾಗಿ ಹರಾಜು ಹಾಕಲಾಗಿತ್ತು ಎಂದು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.