2 ದಶಕಗಳಿಂದ ಶ್ರೇಷ್ಠ ತಾಂತ್ರಿಕ ಶಿಕ್ಷಣ ನೀಡುತ್ತಿರುವ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ

ತುಮಕೂರು, ಜ. ೮- ಕಳೆದ ೨ ದಶಕಗಳ ಹಿಂದೆ ಡಾ. ಎಂ.ಆರ್. ಹುಲಿನಾಯ್ಕರ್ ನೇತೃತ್ವದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಹೆಸರಲ್ಲಿ ಪ್ರಾರಂಭಗೊಂಡ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ಅಂದಿನಿಂದ ಎಲ್ಲ ವರ್ಗದ ಬಡ ವಿದ್ಯಾರ್ಥಿಗಳಿಗೂ ಶ್ರೇಷ್ಠ ತಾಂತ್ರಿಕ ಶಿಕ್ಷಣ ನೀಡುತ್ತಾ ರಾಜ್ಯದಲ್ಲೇ ಶ್ರೇಷ್ಠ ತಾಂತ್ರಿಕ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ಟ್ರಸ್ಟ್ ವತಿಯಿಂದ ವೈದ್ಯಕೀಯ, ಅರೆ ವೈದ್ಯಕೀಯ, ನರ್ಸಿಂಗ್, ಪ್ಯಾರಾಮೆಡಿಕಲ್, ಪಾಲಿಟೆಕ್ನಿಕ್ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳು ನಡೆಯುತ್ತಿದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ, ಹೊರ ರಾಜ್ಯಗಳು ಮತ್ತು ಇತರೆ ಕೆಲವು ಪರದೇಶಗಳ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಓದುತ್ತಿದ್ದು, ಉತ್ತಮ ರೀತಿಯ ಸಹಬಾಳ್ವೆ ಮತ್ತು ವೃತ್ತಿಪರ ಶಿಕ್ಷಣ ಪಡೆಯುತ್ತಿದ್ದಾರೆ. ನೇಪಾಳ ದೇಶದಿಂದ ಬಂದ ವಿದ್ಯಾರ್ಥಿಯೊಬ್ಬ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಇಡೀ ರಾಜ್ಯಕ್ಕೆ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ೨ನೇ ಱ್ಯಾಂಕ್‌ನ್ನು ೨೦೧೮-೧೯ ನೇ ಸಾಲಿಗೆ ಪಡೆದುಕೊಂಡಿದ್ದು, ಶ್ರೇಷ್ಠ ಇಂಜಿನಿಯರಿಂಗ್ ಶಿಕ್ಷಣ ನೀಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.
ಇಂಜಿನಿಯರಿಂಗ್ ಕಾಲೇಜು ಪ್ರಸ್ತುತ ಆರು ವಿಭಾಗಗಳಲ್ಲಿ ಬಿಇ ಪದವಿ ಮತ್ತು ನಾಲ್ಕು ವಿಭಾಗಗಳಲ್ಲಿ ಸ್ನಾತಕೋತ್ತರ ಎಂ.ಟೆಕ್ ಪದವಿ ಮತ್ತು ಎಂ.ಬಿ.ಎ ಶಿಕ್ಷಣ ನೀಡುತ್ತಿದ್ದು, ಅತ್ಯುತ್ತಮ ಮಟ್ಟದ ಲ್ಯಾಬೋರೇಟರಿಗಳು, ಮಾಹಿತಿ ಪೂರ್ಣ ಗ್ರಂಥಾಲಯಗಳನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ಅತ್ಯಂತ ಸ್ನೇಹಮಯ ವಾತಾವರಣ ಮತ್ತು ಕಲಿಕಾ ಪರಿಸರವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.
೨೦೨೦ ನೇ ಇಸವಿಯ ತೀವ್ರತರ ಕೊರೊನಾ ಕಾಲದಲ್ಲೂ ಬದ್ಧತೆಯಿಂದ ಚಾಚೂ ತಪ್ಪದೆ ಆನ್‌ಲೈನ್ ತರಗತಿಗಳನ್ನು ನಡೆಸುವ ಮೂಲಕ ಬೋಧನೆಯನ್ನು ಮಾಡಿ ಉಪನ್ಯಾಸಕ ವರ್ಗದವರು ಕಲಿಕೆಯ ಸೇವೆಯನ್ನು ಕಾಪಾಡಿಕೊಂಡಿರುವುದು ಸಂಸ್ಥೆಯ ಶ್ರೇಷ್ಠತೆಯಾಗಿದೆ. ಈಗಲೂ ಕಾಲೇಜಿನಲ್ಲಿ ಆಫ್‌ಲೈನ್ ಲ್ಯಾಬೋರೇಟರಿ ತರಗತಿಗಳನ್ನು ವಿ.ಟಿ.ಯು. ನಿರ್ದೇಶನದಂತೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಸುರಕ್ಷತೆಯಿಂದ ಹಾಜರಾಗಿ ಕಲಿಯುತ್ತಿದ್ದಾರೆ.
ತರಬೇತಿ ಮತ್ತು ಉದ್ಯೋಗಕ್ಕೆ ಸದಾ ಕಾಲ ಒತ್ತು ನೀಡಿರುವ ಶ್ರೀದೇವಿ ಕಾಲೇಜು ಮೊದಲನೇ ವರ್ಷದಿಂದಲೇ ವ್ಯಕ್ತಿತ್ವ ವಿಕಸನ ತರಬೇತಿ, ಕಾರ್ಪೋರೇಟ್ ಸಂಸ್ಥೆಗಳೊಂದಿಗೆ ಸಂವಹನ, ಭೇಟಿ, ವಿಶೇಷ ಕೋರ್ಸ್‌ಗಳ ಸೆಮಿನಾರ್‍ಗಳು ಇತರೆ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಶೇ. ೯೯ ರಷ್ಟು ಅರ್ಹ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಯಶಸ್ವಿಯಾಗಿ ಪದವೀಧರರು ಹಲವಾರು ಕಂಪೆನಿಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಲಿಕಾ ಪರಿಸರ, ಉತ್ತಮ ಪ್ರಯೋಗಾಲಯಗಳು, ಉದ್ಯಮ ಸ್ನೇಹಿ ತರಬೇತಿ ಮತ್ತು ಉದ್ಯೋಗವಕಾಶಗಳು, ಉತ್ಕೃಷ್ಟ ಉಪನ್ಯಾಸಕರಿಂದ ಬೋಧನೆ ವಿದ್ಯಾರ್ಥಿಗಳ ಮೇಲೆ ನಿರಂತರ ಗಮನ, ಉತ್ತಮ ಅಂಕಗಳಿಕೆಗೆ ಪೂರಕವಾಗುವ ಶೈಕ್ಷಣಿಕ ಕ್ರಮಗಳು, ಮನೋಲ್ಲಾಸದ ಕ್ರೀಡಾ ಮತ್ತು ಸಾಂಸ್ಕೃತಿಕ ಆಚರಣೆಗಳು ಮತ್ತು ಚಟುವಟಿಕೆಗಳು ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ವೈಶಿಷ್ಟ್ಯಗಳಾಗಿವೆ.
ಕಾಲೇಜು ವಿದ್ಯಾರ್ಥಿನಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಕ್ರಮವಾಗಿ ಒಂದು ಸಾವಿರ ಸಂಖ್ಯೆಯವರೆಗೂ ಪ್ರತ್ಯೇಕ ಹಾಸ್ಪೆಲ್ ವ್ಯವಸ್ಥೆಗಳನ್ನು ಹೊಂದಿದ್ದು, ಸದ್ಯದಲ್ಲಿ ಸುಮಾರು ೧೦೦೦ ವಿದ್ಯಾರ್ಥಿನಿಯರು ಮತ್ತು ೮೦೦ ವಿದ್ಯಾರ್ಥಿಗಳು ವಾಸ್ತವ್ಯ ಪಡೆದುಕೊಂಡು ಉತ್ತಮ ಊಟ ಮತ್ತು ವಸತಿಯ ಸೌಲಭ್ಯ ಹೊಂದಿದ್ದಾರೆ. ತುಮಕೂರು ನಗರ ಮತ್ತು ಸುತ್ತಮುತ್ತಲಿನಿಂದ ಕಾಲೇಜಿಗೆ ಸಾರಿಗೆ ವ್ಯವಸ್ಥೆಯಿದ್ದು, ನಗರದಿಂದ ಹಲವಾರು ವಿದ್ಯಾರ್ಥಿನಿಯರು ಪ್ರಯೋಜನ ಪಡೆದಿದ್ದಾರೆ.
ಸದ್ಯದ ಶೈಕ್ಷಣಿಕ ವರ್ಷದಲ್ಲಿ ೨೦೨೦-೨೧ನೇ ಸಾಲಿನಲ್ಲಿ ಸುಮಾರು ಶೇ. ೬೫ ರಷ್ಟು ವಿದ್ಯಾರ್ಥಿಗಳು ಪ್ರಥಮ ವರ್ಷದ ಬಿ.ಇ. ತರಗತಿಗಳಿಗೆ ಪ್ರವೇಶ ಪಡೆದಿದ್ದು, ಆರ್ಥಿಕವಾಗಿ ದುರ್ಬಲರಾದ ವರ್ಗಗಳ ವಿದ್ಯಾರ್ಥಿಗಳು ಸೂಕ್ತ ದಾಖಲಾತಿಗಳೊಂದಿಗೆ ಸಂಪರ್ಕಿಸಿದಲ್ಲಿ ಪ್ರವೇಶ ನೀಡಿ ಸಹಾಯ ಮಾಡುವುದಾಗಿ ತಿಳಿಸಿರುವ ಟ್ರಸ್ಟ್ ಮುಖ್ಯಸ್ಥರಾದ ಡಾ.ಎಂ.ಆರ್.ಹುಲಿನಾಯ್ಕರ್ ಅವಶ್ಯಕವಿರುವವರು ಶೀಘ್ರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.