2 ಡೋಸ್ ಲಸಿಕೆ ಪಡೆದರೆ ಮಾತ್ರ ಮಾಲ್‌ಗಳಿಗೆ ಪ್ರವೇಶ

ಬೆಂಗಳೂರು, ಡಿ.೬- ರಾಜಧಾನಿ ಬೆಂಗಳೂರಿನಲ್ಲಿ ಎರಡು ಡೋಸ್ ಲಸಿಕೆ ಪಡೆದಿದ್ದವರಿಗೆ ಮಾತ್ರ ಮಾಲ್, ವಾಣಿಜ್ಯ ಸಂಕೀರ್ಣ, ಚಿತ್ರಮಂದಿರಗಳ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕೃತ ಆದೇಶ ಹೊರಡಿಸಿದೆ.
ಪ್ರವೇಶ ವೇಳೆ ಕೋವಿಡ್ ಲಸಿಕೆ ಪ್ರಮಾಣಪತ್ರ ಇರಬೇಕು. ವಾಣಿಜ್ಯ ಮಳಿಗೆ ಮಾಲೀಕರು ಪ್ರಮಾಣಪತ್ರ ಪರಿಶೀಲಿಸಬೇಕು. ಜೊತೆಗೆ, ಬಿಬಿಎಂಪಿ ಅಧಿಕಾರಿಗಳು, ಮಾರ್ಷಲ್‌ಗಳು ಪರಿಶೀಲಿಸುತ್ತಾರೆ.
ಒಂದು ವೇಳೆ ಲಸಿಕೆ ಪಡೆಯದವರಿಗೆ ಮಳಿಗೆ ಪ್ರವೇಶಕ್ಕೆ ಅವಕಾಶ ನೀಡಿದರೆ ಅಂಥ ಮಳಿಗೆಗಳ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಎಚ್ಚರಿಸಿದೆ.
ಇನ್ನೂ, ಈ ಎಲ್ಲಾ ಕಡೆಗಳಲ್ಲಿ ಕೋವಿಡ್ ನಿಯಮ ಪಾಲನೆಯ ಖಚಿತೆಯ ಬಗ್ಗೆ ತಿಳಿದುಕೊಳ್ಳಲು ರಹಸ್ಯ ಭೇಟಿ ಕೊಟ್ಟು ಪರಿಶೀಲಿಸಬೇಕು. ಬಿಬಿಎಂಪಿ ಮಾರ್ಷಲ್‌ಗಳು ಮತ್ತು ಆರೋಗ್ಯ ಅಧಿಕಾರಿಗಳು ಯಾವುದೇ ಪೂರ್ವಸೂಚನೆಯಿಲ್ಲದೆ ಆಗಾಗ್ಗೆ ತಪಾಸಣೆಗಾಗಿ ಸಂಸ್ಥೆಗಳಿಗೆ ಭೇಟಿ ನೀಡಬೇಕು.
ಉಲ್ಲಂಘನೆಯನ್ನು ಗಮನಿಸಿದರೆ, ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ಮತ್ತು ಇತರ ಸಂಬಂಧಿತ ಕಾನೂನು ನಿಬಂಧನೆಗಳ ಪ್ರಕಾರ ಕಠಿಣ ಕ್ರಮವನ್ನು ಕೈಗೊಳ್ಳಲು ಬಿಬಿಎಂಪಿ ಸೂಚಿಸಿದೆ.