2 ಡೋಸ್‌ ಲಸಿಕೆ ನೀಡಿಕೆಯಲ್ಲಿ ಬದಲಾವಣೆ ಇಲ್ಲ: ಕೇಂದ್ರ ಸ್ಪಷ್ಟನೆ

ನವದೆಹಲಿ,ಜೂ.1- ದೇಶದಲ್ಲಿ ಕೊರೊನಾ ಸೋಂಕಿಗೆ ನೀಡಲಾಗುವ ಕೋವಿಶಿಲ್ಡ್ ,ಕೊವಾಕ್ಸಿನ್ ಲಸಿಕೆಯ ಎರಡು ಡೋಸ್ ನೀಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಕೋವಿಶೀಲ್ಡ್ ಮೊದಲ ಡೋಸ್ ಪಡೆದ 12 ವಾರಗಳ‌ ನಂತರ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕು. ಇದೇ ಮಾರ್ಗಸೂಚಿಯನ್ನು ಕೋವಾಕ್ಸಿನ್ ಲಸಿಕೆಗೆ ಅನ್ವಯವಾಗಲಿದೆ ಎಂದು ಹೇಳಿದೆ.

ಕೋವಿಶಿಲ್ಡ್, ಕೊವಾಕ್ಸಿನ್ ಮಿಶ್ರಣ ಮಾಡಿ ಒಂದೇ ಲಸಿಕೆ ನೀಡಲಾಗುತ್ತಿದೆ ಎನ್ನುವ ಗೊಂದಲಕ್ಕೆ ಸಚಿವಾಲಯ ತೆರೆ ಎಳೆದಿದೆ.

ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವಾಲಯದ ಕಾರ್ಯದರ್ಶಿ ಲವ್ ಅಗರ್ ವಾಲ್ ಈ ವಿಷಯ ತಿಳಿಸಿದ್ದಾರೆ

ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ ಸಂಖ್ಯೆ ಗಣನೀಯ ಇಳಿಕೆಯಾಗುತ್ತಿದ್ದು, ಚೇತರಿಕೆ ಪ್ರಮಾಣ ಶೇಕಡ 92.1ಕ್ಕೆ ಏರಿಕೆಯಾಗಿದೆ .ದೇಶದಲ್ಲಿ 37 ಲಕ್ಷ ದಷ್ಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡ 50ರಷ್ಟು ಕುಸಿತ ಕಂಡಿದೆ. ಸದ್ಯ ದೇಶದಲ್ಲಿ‌18.9 ಲಕ್ಷ ಸಕ್ರಿಯ ಪ್ರಕಾರಗಳಿಗೆ ಇವೆ ಎಂದು ತಿಳಿಸಿದ್ದಾರೆ.

ಪ್ರತಿದಿನ 1.3 ಲಕ್ಷ ಸಕ್ರಿಯ ಪ್ರಕರಣ‌ ಇಳಿಕೆ:

ಪ್ರತಿದಿನ ಸರಾಸರಿ ಸಕ್ರಿಯ ಪ್ರಕರಣಗಳು 1.3 ಲಕ್ಷದಂತೆ ಕಡಿಮೆಯಾಗುತ್ತಿದೆ.ಕಳೆದ ಒಂದು ವಾರದ ಅವಧಿಯಲ್ಲಿ 30 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿದಿನ ಸರಾಸರಿ 20 ಲಕ್ಷ ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಒಂದು ಲಕ್ಷ 27 ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಮೇ 28ರ ನಂತರ ಪ್ರತಿದಿನ 2 ಲಕ್ಷಕ್ಕೂ ಕಡಿಮೆ ಸೋಂಕು ಸಂಖ್ಯೆ ದಾಖಲಾಗುತ್ತಿದೆ ಎಂದರು.

ಕಳೆದ 24 ಗಂಟೆಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇಕಡ 6.6ರಷ್ಟಿದೆ. ಮೇ 10ರಂದು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 37 ಲಕ್ಷಕ್ಕೂ ಅಧಿಕವಾಗಿತ್ತು. ಇಂದು ಆ ಪ್ರಮಾಣ 18.9 ಲಕ್ಷ ಸಕ್ರಿಯ ಪ್ರಕರಣಗಳಿವೆ ಎಂದು ಹೇಳಿದರು.

21.60ಕೋಟಿ ಮಂದಿಗೆ ಲಸಿಕೆ:

ಇದುವರೆಗೂ ದೇಶದಲ್ಲಿ 21.60 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ

ಒಟ್ಟಾರೆ ಲಸಿಕೆಯ ಈ ಪೈಕಿ 1.67 ಕೋಟಿ ಡೋಸ್ ಆರೋಗ್ಯ ಕಾರ್ಯಕರ್ತರಿಗೆ, 2.42 ಕೋಟಿ ಡೋಸ್ ಮುಂಚೂಣಿ ಕಾರ್ಯಪಡೆ ಸಿಬ್ಬಂದಿಗೆ , 15.48 ಕೋಟಿ ಡೋಸ್ ಲಸಿಕೆಯನ್ನು 45 ವರ್ಷ ದಾಟಿದ ಜನರಿಗೆ ಹಾಕಲಾಗಿದೆ.

ಇದರ ಜೊತೆಗೆ 2.03 ಕೋಟಿ ಡೋಸ್ ಲಸಿಕೆಯನ್ನು 18ರಿಂದ 44 ವಯೋಮಾನದವರಿಗೆ ಹಾಕಲಾಗಿದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ ವಾಲ್ ತಿಳಿಸಿದ್ದಾರೆ

ಲಸಿಕೆ ಕೊರತೆ ಎದುರಾಗದು

ಜುಲೈ ಅಥವಾ ಆಗಸ್ಟ್ ತಿಂಗಳ ಮಧ್ಯಭಾಗದ ವೇಳೆಗೆ ದೇಶದಲ್ಲಿ ಕೊರೊನಾ ಸೋಂಕಿನ ಲಸಿಕೆ ಅಭಾವ ಇರುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಲಿ ನಿರ್ದೇಶಕ ಡಾ.‌ಬಲರಾಮ್ ಭಾರ್ಗವ ತಿಳಿಸಿದ್ದಾರೆ.

ವರ್ಷಾಂತ್ಯದ ವೇಳೆಗೆ ದೇಶದ ಎಲ್ಲ ಜನರಿಗೆ ಲಸಿಕೆ ಹಾಕುವ ಗುರಿಯನ್ನ ಕೇಂದ್ರ ಸರ್ಕಾರ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಮಕ್ಕಳ ಕಡೆ ಗಮನ

ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆ ಕಡೆ ಹೆಚ್ಚು ಗಮನ ಹರಿಸಲಾಗಿದೆ ಎಂದು ನೀತಿ ಆಯೋಗದ ಸದಸ್ಯ ಡಾ. ವಿಕೆ ಪಾಲ್ ತಿಳಿಸಿದ್ದಾರೆ.

ದೇಶದ ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಹಾಸಿಗೆ ಕಾಯ್ದಿರಿಸುವಂತೆ ಸೂಚಿಸಲಾಗಿದೆ.ಸದ್ಯ ಮಕ್ಕಳಲ್ಲಿ ಸೋಂಕು ಪ್ರಮಾಣ ಅಪಾಯಕಾರಿಯಾಗಿಲ್ಲ ಎಂದು ಹೇಳಿದ್ದಾರೆ.

ಮಕ್ಕಳಲ್ಲಿ ಎದುರಾಗಬಹುದಾದ ಸಮಸ್ಯೆ ಎದುರಿಸಲು ಸಜ್ಜಾಗಿರುವುದಾಗಿ ತಿಳಿಸಿದ್ದಾರೆ