2 ಕೋಟಿ ೫೬ ಲಕ್ಷ ಮೌಲ್ಯದ ಚಿನ್ನ ಕಳವು 7 ಮಂದಿ ಗ್ಯಾಂಗ್ ಸೆರೆ

ಬೆಂಗಳೂರು,ಡಿ.೧-ಸುಮಾರು ೨ ಕೋಟಿ ೫೬ ಲಕ್ಷ ಮೌಲ್ಯದ ೫,೫೯೩ ಕೆ.ಜಿ ಚಿನ್ನದ ಗಟ್ಟಿಗಳನ್ನು ಸಿನಿಮೀಯ ರೀತಿಯಲ್ಲಿ ದೋಚಿ ಪರಾರಿಯಾಗಿದ್ದ ೭ಮಂದಿ ಖದೀಮರ ಗ್ಯಾಂಗ್ ಬಂಧಿಸುವಲ್ಲಿ ಕೇಂದ್ರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಗಾವಾರ , ಗೋವಿಂದಪುರ ಹಾಗೂ ಆರ್.ಟಿ.ನಗರದ ಅಂಜುಂ ಅಲಿಯಾಸ್ ಆಮ್ಜದ್ (೩೪)ಉಮೇಶ್ (೫೪)ಸುಹೈಲ್ ಬೇಗ್ ಅಲಿಯಾಸ್ ಬಾಬು (೨೪)ಮೊಹಮ್ಮದ್ ಫರಾನ್ ಅಲಿಯಾಸ್ ಶಹಬಾಜ್ (೨೩)ಮೊಹಮ್ಮದ್ ಆರೀಪ್ ಅಲಿಯಾಸ್ ಆರೀಫ್ (೨೪)ಮೊಹಮ್ಮದ್ ಹುಸೇನ್ ಅಲಿಯಾಸ್ ಅಬ್ಬಾಸ್(೩೫)ಸೈಯದ್ ಅಹಮದ್ ಅಲಿಯಾಸ್ ಅಹಮದ್ (೨೪) ಬಂಧಿತ ಗ್ಯಾಂಗ್ ನ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಲಾಂಗ್ , ಒಂದು ಬೈಕ್ ಹಾಗೂ ಸುಲಿಗೆ ಮಾಡಲಾಗಿದ್ದ ಸುಮಾರು ೨.೨೫ ಕೋಟಿ ರೂ ಮೌಲ್ಯದ ಚಿನ್ನವನ್ನು ವಶ ಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಓರ್ವ ಅಟೆಕಾ ಗೋಲ್ಡ್ ಕಂಪನಿಯಲ್ಲಿ ವಾಚ್‌ಮ್ಯಾನ್ ಕೆಲಸ ಮಾಡುತ್ತಿದ್ದು ಅಗಿಂದಾಗ್ಗೆ ಬರುವ ಗ್ರಾಹಕರ ಬಗ್ಗೆ ನಿಗಾ ವಹಿಸಿ ಬಂಧಿತ ಮತ್ತೊಬ್ಬ ಆರೋಪಿಯೊಂದಿಗೆ ಮಾಹಿತಿ ಹಂಚಿಕೊಂಡು ನಂತರ ೭ ಮಂದಿಯ ಗ್ಯಾಂಗ್ ಕಟ್ಟಿಕೊಂಡು ಕೃತ್ಯ ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿದರು.
ಸಂಸ್ಕಾರ್ ಎಂಟರ್ ಪ್ರೈಸನ್ ಎಂಬ ಹೆಸರಿನ ಬುಲಿಯನ್ ವ್ಯವಹಾರ ನಡೆಸುತ್ತಿದ್ದ ಸಿದ್ದೇಶ್ವರ ಸಿಂಗ್ ಅವರು ತಮ್ಮ ಕೆಲಸಗಾರಬ ಜೊತೆ ಕಳೆದ ನ.೧೯ರಂದು ರಾತ್ರಿ ೮.೩೦ರ ವೇಳೆ ಕ್ವಿನ್ಸ್ ರಸ್ತೆಯ ಇಂಡಿಯನ್ ಎಕ್ಸ್‌ಪ್ರೆಸ್ ಬಳಿಯ ಅಟ್ಟಿಕಾ ಗೋಲ್ಡ್ ಶೋ ರೂಂನಿಂದ ೨ ಕೋಟಿ ೨೫ ಲಕ್ಷ ಮೌಲ್ಯದ ೫,೫೯೩ ಕೆ.ಜಿ ಚಿನ್ನದ ಗಟ್ಟಿಗಳನ್ನು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು.
ಮಾರ್ಗ ಮಧ್ಯದಲ್ಲಿ ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ರಾಜ್ ಹೋಟೆಲ್ ಬಳಿ ಇರುವ ೨೨ ನೇ ಕ್ರಾಸ್‌ಗೆ ಬಂದಾಗ ಬಂಧಿತರಲ್ಲಿ ಇಬ್ಬರು ಬೈಕ್ ನಲ್ಲಿ ಬಂದು ಅಡ್ಡ ಹಾಕಿ ಕತ್ತಿಯಿಂದ ಬೀಸಿದ್ದು ಹಲ್ಲೆ ಮಾಡಲು ಪ್ರಯತ್ನಿಸಿದ್ದರು.
ಇಬ್ಬರು ಕೆಳಗೆ ಬಿದ್ದಾಗ ದ್ವಿಚಕ್ರ ವಾಹನ ಹಾಗೂ ೨ ಕೋಟಿ ೫೬ ಲಕ್ಷ ಮೌಲ್ಯದ ಚಿನ್ನದ ಗಟ್ಟಿಗಳನ್ನು ಕಸಿದು ಪರಾರಿಯಾಗಿದ್ದರು.
ಈ ಸಂಬಂಧ ಸಿದ್ದೇಶ್ವರ ಸಿಂಗ್ ಅವರು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣದ ಪತ್ತೆಗೆ ಡಿಸಿಪಿ ಎಂ.ಎನ್. ಅನುಚೇತ್ ಅವರು ಹಲಸೂರು ಗೇಟ್ ಪೊಲೀಸ್ ಇನ್ಸ್ ಪೆಕ್ಟರ್ ದೀಪಕ್ ನೇತೃತ್ವದ ಎರಡು ವಿಶೇಷ ತಂಡಗಳನ್ನು ರಚಿಸಿದ್ದರು. ತಂಡಗಳು ಲಭ್ಯ ಮಾಹಿತಿ ಮತ್ತು ಸಾಕ್ಷಾಧಾರಗಳ ಮೇರೆಗೆ ಕಾರ್ಯಾಚರಣೆ ಕೈಗೊಂಡು ಖಚಿತವಾದ ಮಾಹಿತಿಯನ್ನು ಆಧರಿಸಿ ಗ್ಯಾಂಗ್ ಬಂಧಿಸಿದ್ದಾರೆ.
ಬಂಧಿತರಿಂದ ೨.೨೫ ಕೋಟಿ ರೂ.ಬೆಲೆ ಬಾಳು ೪೯೮೪ ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಬಂಧಿತ ಮೊದಲ ಹಾಗೂ ಎರಡನೇ ಆರೋಪಿಗಳ ವಿರುದ್ಧ ಕೆ.ಜಿ ನಗರ ಪೊಲೀಸ್ ಠಾಣೆ ಮತ್ತು ತಿಪಟೂರು ಪೊಲೀಸ್ ಠಾಣೆಗಳಲ್ಲಿ ಕೊಲೆ , ಸುಲಿಗೆ , ದರೋಡೆಗೆ ಒಳಸಂಚು , ಹಣಕ್ಕಾಗಿ ಅಪಹರಣ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್ . ಅನುಚೇತ್ ಹಲಸೂರು ಗೇಟ್ ಉಪ ವಿಭಾಗದ ಎಸಿಪಿ ನಜ್ಮಾ ಫಾರೂಖಿ ಅವರಿದ್ದರು.
ಪ್ರಕರಣವನ್ನು ಪತ್ತೆಹಚ್ಚಿದ ಪೊಲೀಸ್ ತಂಡಗಳಿಗೆ ಕಮಲ್ ಪಂತ್ ಅವರು ೭೦ ಸಾವಿರ ನಗದು ಬಹುಮಾನ ಘೋಷಿಸಿದರು.