2ವಾರಗಳಲ್ಲಿ ಮಹಾ ಸಿಎಂ ಕುರ್ಚಿ ಬದಲು

ನಾಗ್ಪುರ,ಆ.೨೦- ಮಹಾರಾಷ್ಟ್ರದಲ್ಲಿ ಮುಂದಿನ ೧೫-೨೦ ದಿನಗಳಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾಗಲಿದೆ ಎನ್ನುವ ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ವಿಜಯ ವಾಡೆತ್ತಿವಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ನಾಯಕನ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವಂಕುಲೆ ತಿರುಗೇಟು ನೀಡಿದ್ದು, ಮುಖ್ಯಮಂತ್ರಿ ಕುರ್ಚಿ ಬದಲಾವಣೆ ವಿಷಯ ಇಬ್ಬರು ನಾಯಕರ ನಡುವೆ ಮಾತಿನ ಸಮರಕ್ಕೆ ವೇದಿಕೆಯಾಗಿದೆ.
ಸುದ್ದಿಗಾರೊಂದಿಗೆ ಮಾತನಾಡಿದ ಕಾಂಗ್ರೆಸ್‌ನ ನಾಯಕ ವಿಜಯ ವಾಡೆತ್ತಿವಾರ್, “ಸೆಪ್ಟೆಂಬರ್‍ನಲ್ಲಿ ರಾಜ್ಯದಲ್ಲಿ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ನಡುವೆ ಎಲ್ಲವೂ ಸರಿಯಾಗಿಲ್ಲ ಅಧಿಕಾರದ ಲಾಲಸೆಗಾಗಿ ಮೂವರೂ ಒಟ್ಟಾದರು ಮತ್ತು ಅದಕ್ಕಾಗಿ ಅತ್ಯಂತ ಕೆಳಮಟ್ಟಕ್ಕೆ ಇಳಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ಹೇಳಿಕೆ ಪ್ರತಿಕ್ರಿಯಿಸಿರುವ ಬವಾಂಕುಲೆ, ಬಿಜೆಪಿಯ ಎಲ್ಲಾ ಹಿರಿಯ ಸಚಿವರು ಮತ್ತು ಫಡ್ನವಿಸ್ ಅವರು ೨೦೨೪ ರ ಚುನಾವಣೆಯವರೆಗೆ ಏಕನಾಥ್ ಶಿಂಧೆ ತಮ್ಮ ನಾಯಕರಾಗಿರುತ್ತಾರೆ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಮುಂಬರುವ “ವಿಧಾನಸಭಾ ಚುನಾವಣೆಯೂ ಸಹ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮುಂದಿಟ್ಟುಕೊಂಡು ಶಿಂಧೆ ಸೇನೆ, ಬಿಜೆಪಿ ಮತ್ತು ಎನ್‌ಸಿಪಿ ಹೋರಾಟ ಮಾಡಲಿವೆ ಎಂದಿದ್ಧಾರೆ.
೨೦೦ ಕ್ಕೂ ಹೆಚ್ಚು ವಿಧಾನಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ. ಈಗಲೂ ಸಹ, ಸರ್ಕಾರ ೨೦೦ ಕ್ಕೂ ಹೆಚ್ಚು ಶಾಸಕರೊಂದಿಗೆ ಕೆಲಸ ಮಾಡುತ್ತಿದೆ ಮತ್ತು ಏಕನಾಥ್ ಶಿಂಧೆ ನಮ್ಮ ನಾಯಕರಾಗಿ ಮುಂದುರಿಯಲಿದ್ದಾರೆ ಎಂದಿದ್ಧಾರೆ.