2ಬಿ’ ಮೀಸಲಾತಿ ರದ್ದತಿ ವಿರೋಧಿಸಿ ಮುಸ್ಲಿಮರ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮಾ.31: ‘2ಬಿ’ ಮೀಸಲಾತಿ ರದ್ದುಪಡಿಸಿರುವುದನ್ನು ವಿರೋಧಿಸಿ ಮುಸ್ಲಿಂ ಸಮುದಾಯದವರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಶಾಸ್ತ್ರಿ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮೀಸಲಾತಿ ರದ್ದತಿ ಆದೇಶ ಹಿಂಪಡೆಯಲು ಆಗ್ರಹಿಸಿ ತಹಶೀಲ್ದಾರ್ ಕೆ.ಶರಣಮ್ಮ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮುಖಂಡ ಸಿ.ಚಾಂದಸಾಹೇಬ್ ಮಾತನಾಡಿ, ಸಂವಿಧಾನಿಕ ಮೀಸಲಾತಿ ಸೌಲಭ್ಯವನ್ನು ರದ್ದುಪಡಿಸುವ ಮೂಲಕ ಬಿಜೆಪಿ ಸರ್ಕಾರ ಧರ್ಮಾಧಾರಿತವಾಗಿ ಸಮಾಜ ಒಡೆಯುತ್ತಿದೆ. ಮುಸ್ಲಿಮರ ‘2ಬಿ’ ಮೀಸಲಾತಿ ಕಿತ್ತುಕೊಂಡು ಇತರೆ ಸಮಾಜಗಳಿಗೆ ನೀಡುವ ಮೂಲಕ ಸರ್ಕಾರ ಮುಸ್ಲಿಮರಿಗೆ ಅನ್ಯಾಯ ಮಾಡಿದೆ. ಕೂಡಲೇ ಸರ್ಕಾರ ಮುಸ್ಲಿಮರ ಮೀಸಲಾತಿಯನ್ನು ಯಥಾವತ್ತಾಗಿ ಉಳಿಸಬೇಕು ಎಂದು ಆಗ್ರಹಿಸಿದರು.
ಮುಖಂಡ ಕಾಗದ ಗೌಸ್ ಮೊಹಿದ್ದೀನ್ ಮಾತನಾಡಿ, ಎಲ್ಲ ಜನಾಂಗಗಳು ಮೀಸಲಾತಿ ಸೌಲಭ್ಯ ಹೆಚ್ಚಿಸುವಂತೆ ಹೋರಾಟ ಮಾಡುತ್ತಿವೆ. ಈ ಹಿಂದೆ ಸಾಂವಿಧಾನಿಕವಾಗಿ ನೀಡಿದ್ದ ಮೀಸಲಾತಿ ಸೌಲಭ್ಯವನ್ನು ಕಿತ್ತುಕೊಂಡು ಮುಸ್ಲಿಮರಿಗೆ ಅನ್ಯಾಯ ಮಾಡಲಾಗಿದೆ. ಕೂಡಲೇ ಮೀಸಲಾತಿ ರದ್ದತಿ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಬಾವಿಹಳ್ಳಿ ಗೌಸ್ ಸಾಬ್ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ 60 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ತೆತ್ತಿದ್ದಾರೆ. ನಮಗೂ ದೇಶಾಭಿಮಾನವಿದೆ. ದೇಶದ್ರೋಹಿ ಕೆಲಸ ಮಾಡುವ ಯಾರನ್ನೇ ಆಗಲಿ ಶಿಕ್ಷಿಸಿ. ಇದನ್ನೇ ನೆಪವಾಗಿಟ್ಟುಕೊಂಡು ನಮ್ಮ ಸಮುದಾಯವನ್ನು ಗುರಿಯಾಗಿಸಿ ಇಂತಹ ಅಸಂವಿಧಾನಿಕ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಹೇಳಿದರು.
ಯುವ ಮುಖಂಡ ಕೆ.ಎಸ್.ಶಬ್ಬೀರ್ ಮಾತನಾಡಿ, ಮುಸ್ಲಿಂ ಸಮುದಾಯವನ್ನು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ದೂರ ಇಡುವಂಥ ಬಿಜೆಪಿ ನೇತೃತ್ವದ ಸರ್ಕಾರದ ನಿರ್ಧಾರ ಖಂಡನೀಯ. ಸಮಾಜ ಒಡೆಯುವಂಥ ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್ ಮುಂತಾದ ವಿವಾದಗಳನ್ನು ಸರ್ಕಾರ ಸೃಷ್ಟಿಸಿದಾಗಲೂ ನಾವು ಸಹಿಸಿಕೊಂಡಿದ್ದೇವೆ. ಇದೀಗ ನಮ್ಮ ಬದುಕಿಗೆ ಶಾಪವಾಗುವಂಥ ಮೀಸಲಾತಿ ರದ್ದತಿ ತೀರ್ಮಾನವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಪುರಸಭೆ ಸದಸ್ಯ ಸರ್ಜಪ್ಪನವರ ಶಫಿವುಲ್ಲಾ, ಮುಖಂಡರಾದ ಬಿ.ಅಬೂಬಕರ್, ಎಂ.ಅಬ್ದುಲ್ ವಾಜೀದ್ ಇತರರು ಮಾತನಾಡಿದರು. ಹೆಚ್.ಶೇಕ್ ಮಹ್ಮದ್, ಹುಲಿಗಿ ದಾವಲ್ ಮಾಲಿಕ್, ಮಾಣಿಕ ಬಾಷಾ, ಎಂ.ರಾಜಾ, ಮುಲ್ಲಾ ಗೌಸ್ ಸಾಬ್, ವಾರದ ಸಿಖಂದರ್, ಇಸಾಕ್ ಸಾಬ್, ಕೊಟ್ಟೂರು ಗೌಸ್, ಬಿಚ್ಚುಗತ್ತಿ ಖಾಜಾಹುಸೇನ್ ಇತರರು ಇದ್ದರು.