2ನೇ ಹಂತದ ಮೆಟ್ರೋ 2024ಕ್ಕೆ ಪೂರ್ಣ

ಬೆಂಗಳೂರು, ಜು. ೩೦- ಬೆಂಗಳೂರು ಮೆಟ್ರೋ ರೈಲಿನ 2ನೇ ಹಂತದ ಕಾಮಗಾರಿಗಳು ಬರುವ 2024ರ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಶಿವಾಜಿ ನಗರದ ಅಬ್ದುಲ್ ಬಾರಿ ಹೈಸ್ಕೂಲ್ ಮೈದಾನದಲ್ಲಿಂದು ಬೆಂಗಳೂರು ಮೆಟ್ರೋ ರೈಲು ನಿಗಮ ಆಯೋಜಿಸಿದ್ದ ಬೆಂಗಳೂರು ಮೆಟ್ರೋ ಹಂತ-2 ಕಂಟೋಲ್ಮೆಂಟ್ ರೈಲ್ವೆ ನಿಲ್ದಾಣದಿಂದ ಶಿವಾಜಿ ನಗರ ಮೆಟ್ರೋ ನಿಲ್ದಾಣಗಳ ನಡುವಿನ ಸುರಂಗ ಮಾರ್ಗ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮೆಟ್ರೋ 2ನೇ ಹಂತದ 25.5 ಕಿ.ಮೀ. ಉದ್ದದ ಕಾಮಗಾರಿಗಳು ಪ್ರಗತಿಯಲ್ಲಿದ್ದು, 2024ರ ವೇಳೆಗೆ ಈ ಎಲ್ಲ ಕಾಮಗಾರಿಗಳು ಪೂರ್ಣಗೊಂಡು 2ನೇ ಹಂತದ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ ಎಂದರು.
ನಗರದ ವಾಹನ ದಟ್ಟಣೆಯನ್ನು ಕಡಿಮೆ ಮಾಡಿ ಜನರನ್ನು ಕ್ಷಿಪ್ರ ಗತಿಯಲ್ಲಿ ಅವರನ್ನು ಗಮ್ಯದತ್ತ ಕರೆದೊಯ್ಯಲು ಮೆಟ್ರೋ ನೆರವಾಗುತ್ತಿದೆ. 2ನೇ ಹಂತದ ಕಾಮಗಾರಿಗೆ ಸುಮಾರು 30,695 ಕೋಟಿ ರೂ. ವೆಚ್ಚವಾಗಲಿದೆ ಎಂದರು.
ಗೊಟ್ಟಿಕೆರೆ ಮತ್ತು ನಾಗವಾರ ನಡುವೆ ಮೆಟ್ರೋ 2ನೇ ಹಂತದ ಕಾಮಗಾರಿಗಳು ನಡೆದಿದೆ ಎಂದ ಅವರು, ಈ 2ನೇ ಹಂತದ ಮೆಟ್ರೋ ಕಾಮಗಾರಿಯ ಉದ್ದ 25.5 ಕಿ.ಮೀ.ನಲ್ಲಿ 7.5 ಕಿ.ಮೀ. ಎತ್ತರಿಸಿದ ಮಾರ್ಗವಿದ್ದು, 6 ಎತ್ತರಿಸಿದ ರೈಲ್ವೆ ನಿಲ್ದಾಣಗಳು ಹಾಗೂ 12 ನೆಲದಡಿ ರೈಲ್ವೆ ನಿಲ್ದಾಣಗಳು ಇದ್ದು, ಅವಳಿ ಸುರಂಗ ಮಾರ್ಗದ ಒಟ್ಟು ಉದ್ದ 13.9 ಕಿ.ಮೀ. ಎಂದು ಅವರು ಹೇಳಿದರು.
ಮೆಟ್ರೇ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲು 2ನೇ ಹಂತದ ಮೆಟ್ರೋ ಕಾಮಗಾರಿಗಳನ್ನು 4 ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ ಎಂದು ಅವರು ತಿಳಿಸಿದರು.
2ನೇ ಹಂತದಲ್ಲಿ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಹೊಸ ಮಾರ್ಗವನ್ನು 2022 ರೊಳಗೆ ಹಾಗೂ ಕಾರ್ಯನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ರೈಲು ಮಾರ್ಗವನ್ನು 2024 ರಲ್ಲಿ ಪೂರ್ಣಗೊಳಿಸಿ ಕಾರ್ಯಾಚರಣೆಗೊಳಿಸುವ ಯೋಜನೆ ಇದೆ ಎಂದರು.
ಇದರ ಜತೆಗೆ 2ನೇ ಹಂತದ ವಿಸ್ತರಣಾ ಮಾರ್ಗಗಳಾದ ಯಳಚೇನಹಳ್ಳಿಯಿಂದ ಅಂಜನಾಪುರದ ಮಾರ್ಗ ನವೆಂಬರ್ 2020 ರಲ್ಲಿ, ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ಮಾರ್ಗ 2021ರ ಫೆಬ್ರವರಿಯಲ್ಲಿ, ನಾಗಸಂದ್ರದಿಂದ ಪಿ.ಐ.ಇ.ಸಿ.ವರೆಗೆನ ಮಾರ್ಗ 2022ರ ಜನವರಿಯಲ್ಲಿ ಹಾಗೂ ಬೈಯ್ಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ವರೆಗಿನ ವಿಸ್ತರಣಾ ಮಾರ್ಗಗಳು 2022ರ ಜೂನ್‌ ಒಳಗೆ ಪೂರ್ಣಗೊಂಡು ಕಾರ್ಯಾಚರಣೆ ಮಾಡಲಿವೆ ಎಂದರು.
ಒಟ್ಟಾರೆ 2ನೇ ಹಂತದ ಮೆಟ್ರೋ ಕಾಮಗಾರಿಗಳು 2024ರ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಅವರು ಹೇಳಿದರು.
ವಿಮಾನ ನಿಲ್ದಾಣಕ್ಕೆ ಸಂಪರ್ಕ: ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂ ಮಾರ್ಗವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿದೆ. ಸುಮಾರು 9,934 ಕೋಟಿ ರೂ.ಗಳ ವೆಚ್ಚದಲ್ಲಿ ರೈಲ್ವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಮೆಟ್ರೋ ಸಂಪರ್ಕ ಸಿಗಲಿದೆ ಎಂದರು.
ಬೆಂಗಳೂರು ಅಭಿವೃದ್ಧಿಗೆ ಬದ್ಧ: ಜಾಗತಿಕವಾಗಿ ಗುರುತಿಸಿಕೊಂಡಿರುವ ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರು ನಗರಕ್ಕೆ ಮೂಲಭೂತ ಸೌಕರ್ಯ ಒದಗಿಸುವುದು ಸರ್ಕಾರದ ಜವಾಬ್ದಾರಿ. ಬೆಂಗಳೂರು ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಅದರಂತೆ ರಸ್ತೆ ಜಾಲಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಸ್ಮಾರ್ಟ್‌ಸಿಟಿ ಯೋಜನೆಯಡಿ ಬೆಂಗಳೂರಿನ ಹೃದಯ ಭಾಗದಲ್ಲಿ 25.5 ಕಿ.ಮೀ. ಉದ್ದದ 36 ರಸ್ತೆಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಈ ರಸ್ತೆ ಅಭಿವೃದ್ಧಿಗೆ ಸ್ಮಾರ್ಟ್‌ಸಿಟಿ ಯೋಜನೆಯಡಿ 456.56 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಬೆಂಗಳೂರಿನ ಮೂಲಭೂತ ಸೌಕರ್ಯಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸುವ ಜತೆಗೆ ಕೋವಿಡ್‌-19‌ನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಅವರು ಹೇಳಿದರು.
ಬೆಂಗಳೂರು ಅಭಿವೃದ್ಧಿಗೆ ಮೆಟ್ರೋ ಸೇರಿದಂತೆ ಕೈಗೆತ್ತಿಕೊಂಡಿರುವ ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಚಾಲನೆ ನೀಡಿದ ಶಿವಾಜಿನಗರ ಮತ್ತು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಗಳ ನಡುವಿನ ಮೆಟ್ರೋ ಸುರಂಗ ಮಾರ್ಗ 850 ಮೀಟರ್ ಉದ್ದವಿದ್ದು, ಊರ್ಜ ಮತ್ತು ಇಂಡಿಯಾ ಹೆಸರಿನ ಎರಡು ಸುರಂಗ ಕೊರೆಯುವ ಯಂತ್ರಗಳು ಸುರಂಗ ಮಾರ್ಗಗಳನ್ನು ನಿರ್ಮಿಸಲಿವೆ.
ಈ ಕಾರ್ಯಕ್ರಮದಲ್ಲಿ ಸಚಿವರಾದ ಆರ್.ಅಶೋಕ್, ಬಿ.ಬಸವರಾಜು, ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಇದ್ದರು.