
ಬೆಂಗಳೂರು, ಸೆ.೫- ಈಗಾಗಲೇ ಚಂದ್ರನ ಮೇಲೆ ರೋವರ್ ಇಳಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡು, ಇದೀಗ ಸೂರ್ಯನೆಡೆಗೆ ಆದಿತ್ಯ ಎಲ್೧ ರವಾನಿಸಿರುವ ಇಸ್ರೊ ಇದೀಗ ಮತ್ತೊಂದು ಸಾಧನೆ ಮಾಡಿದೆ. ಇಂದು (ಮಂಗಳವಾರ) ಮುಂಜಾನೆ ಎರಡನೇ ಬಾರಿಗೆ ಭೂಮಿಗೆ ಸುತ್ತುವರಿಯುವ ಕುಶಲತೆ (ಮ್ಯಾನುವರ್)ಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಇಸ್ರೊ ಪ್ರಕಟಣೆ ಹೊರಡಿಸಿದೆ. ಮುಂದಿನ ಮ್ಯಾನುವರ್ ಹಂತವು ಸೆಪ್ಟೆಂಬರ್ ೧೦ರಂದು ನಡೆಯಲಿದೆ.
ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಐಎಸ್‌ಟಿಆರ್‌ಎಸಿ) ಈ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆ ವೇಲೆ ಇಸ್ರೊದ ಬೆಂಗಳೂರು, ಮಾರಿಷಿಯಸ್, ಪೋರ್ಟ್ ಬ್ಲೇರ್‌ನಲ್ಲಿರುವ ಕಮಾಂಡ್ ಸೆಂಟರ್‌ಗಳಿಂದ ಉಪಗ್ರಹದ ಟ್ರ್ಯಾಕಿಂಗ್ ನಡೆಸಲಾಗಿದೆ. ಮುಂದಿನ ಮ್ಯಾನುವರ್ ಹಂತವು ಸೆಪ್ಟೆಂಬರ್ ೧೦ರ ಮಧ್ಯಾಹ್ನ ೨:೩೦ಕ್ಕೆ ನಿಗದಿಪಡಿಸಲಾಗಿದೆ ಎಂದು ಇಸ್ರೋ ಸಂಸ್ಥೆಯು ಎಕ್ಸ್ (ಟ್ವಿಟರ್)ನಲ್ಲಿ ತಿಳಿಸಿದೆ. ಲ್ಯಾಂಗ್ರೇಂಜ್ ಪಾಯಿಂಟ್ ಎಲ್೧ ಕಡೆಗೆ ವರ್ಗಾವಣೆ ಕಕ್ಷೆಗೆ ಬಾಹ್ಯಾಕಾಶ ನೌಕೆಯನ್ನು ಸ್ಥಾಪಿಸುವ ಮುನ್ನ ಭೂಮಿಗೆ ಎರಡು ಬಾರಿ ಸುತ್ತು ವರದಿ ಕಕ್ಷೆಯ ಕುಶಲತೆಯು ನಡೆಯಲಿದೆ. ಅಂತಿಮವಾಗಿ ಆದಿತ್ಯ ಎಲ್೧ ನೌಕೆಯು ಸುಮಾರು ೧೨೭ ದಿನಗಳ ಸುದೀರ್ಘ ದಿನಗಳ ನಂತರ ಎಲ್೧ ಪಾಯಿಂಟ್‌ನಲ್ಲಿ ಉದ್ದೇಶಿತ ಕಕ್ಷೆಗೆ ಆಗಮಿಸುವ ಎಲ್ಲಾ ಸಾಧ್ಯತೆ ಇದೆ. ಇನ್ನು ಸೆಪ್ಟೆಂಬರ್ ೨ ರಂದು ಇಸ್ರೊದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ ಸಿ೫೭)ನಲ್ಲಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಪ್ಯಾಡ್‌ನಿಂದ ಆದಿತ್ಯ-ಎಲ್೧ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಇದು ಸೂರ್ಯನೆಡೆಗೆ ಕಳುಹಿಸಲಾದ ಇಸ್ರೊ ಮೊದಲ ಯೋಜನೆಯಾಗಿದೆ.