
ಬೆಂಗಳೂರು, ಮೇ ೨೩- ೧೬ನೇ ವಿಧಾನಸಭೆಗೆ ಆಯ್ಕೆಯಾಗಿರುವ ೨೨೪ ಸದಸ್ಯರುಗಳ ಪೈಕಿ ೧೬ ಸದಸ್ಯರುಗಳನ್ನೊರತುಪಡಿಸಿ ಉಳಿದೆಲ್ಲ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿವೇಶನದ ೨ನೇ ದಿನವಾದ ಇಂದು ನೂತನ ಸದಸ್ಯರುಗಳ ಪ್ರಮಾಣ ವಚನ ಕಲಾಪ ನಡೆಯಿತು.
ವಿಧಾನಸಭೆಯ ಅಧಿವೇಶನದ ಮೊದಲ ದಿನವಾದ ನಿನ್ನೆ ೧೮೨ ಸದಸ್ಯರು ಶಾಸಕತ್ವದ ಪ್ರಮಾಣ ವಚನ ಸ್ವೀಕರಿಸಿದ್ದು, ಬಾಕಿ ಉಳಿದ ಸದಸ್ಯರ ಪೈಕಿ ೧೬ ಸದಸ್ಯರನ್ನೊರತುಪಡಿಸಿ ಉಳಿದ ಸದಸ್ಯರ ಪ್ರಮಾಣ ವಚನ ಇಂದು ಮುಗಿದಿದ್ದು, ಒಟ್ಟಾರೆ ೨೦೮ ಸದಸ್ಯರು ಶಾಸಕರಾಗಿ ಪ್ರಮಾಣವಚನ ಪೂರ್ಣಗೊಂಡಿದೆ.
ಇಂದು ಸದನ ಆರಂಭವಾಗುತ್ತಿದ್ದಂತೆ ಹಂಗಾಮಿ ಸಭಾಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರು ಪ್ರಮಾಣ ವಚನ ಕಲಾಪವನ್ನು ಕೈಗೆತ್ತಿಕೊಂಡಿದ್ದು, ನಿನ್ನೆ ಪ್ರಮಾಣ ವಚನ ಸ್ವೀಕರಿಸದ ಸದಸ್ಯರುಗಳು ಇಂದು ಒಬ್ಬೊಬ್ಬರಾಗಿ ಬಂದು ಪ್ರಮಾಣ ವಚನ ಸ್ವೀಕರಿಸಿದರು.
ಸದಸ್ಯರ ಪ್ರಮಾಣವಚನ ನಂತರ ಹಂಗಾಮಿ ಸಭಾಧ್ಯಕ್ಷರಾದ ಆರ್.ವಿ ದೇಶ್‌ಪಾಂಡೆ ಅವರು ೧೬ ಜನರನ್ನು ಬಿಟ್ಟು ಉಳಿದೆಲ್ಲ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸದ ಸದಸ್ಯರುಗಳು ನಾಳಿನ ವಿಧಾನಸಭಾಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ, ಹಾಗಾಗಿ, ಇಂದು ತಮ್ಮ ಕಚೇರಿಗೆ ಬಂದು ಈ ಸದಸ್ಯರುಗಳು ಪ್ರಮಾಣವಚನ ಸ್ವೀಕರಿಸುವಂತೆ ಸೂಚಿಸಿದರು. ನಂತರ ಸದನವನ್ನು ನಾಳೆಗೆ ಮುಂದೂಡಿದರು.
ನಾಳೆ ನೂತನ ವಿಧಾನಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ನಡೆಯಲಿದ್ದು, ಕಾಂಗ್ರೆಸ್‌ನ ಯು.ಟಿ. ಖಾದರ್‌ರವರು ವಿಧಾನಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತ
ಇಂದು ಶಾಸಕರಾಗಿ ಸದಸ್ಯರುಗಳಾದ ಲಕ್ಷ್ಮಿ ಹೆಬ್ಬಾಳ್ಕರ್, ಮಹೇಶ್ ಟೆಂಗಿನಕಾಯಿ, ಮಂಜುಳಾ ಅರವಿಂದ ಲಿಂಬಾವಳಿ, ಎಂ.ವೈ ಪಾಟೀಲ್, ಎಸ್. ರಘು, ರವಿಕುಮಾರ್ ಗಣಿಗ, ರಿಜ್ವಾನ್ ಹರ್ಷದ್, ಸಂತೋಷ್‌ಲಾಡ್, ಶರಣು ಸಲಗಾರ್, ಶಾಂತನಗೌಡ, ಎನ್.ಹೆಚ್ ಕೋನರೆಡ್ಡಿ, ಎಸ್.ಆರ್ ಶ್ರೀನಿವಾಸ್, ಡಿ. ಸುಧಾಕರ್, ಸುನಿಲ್‌ಕುಮಾರ್, ಬಿ.ವೈ ವಿಜಯೇಂದ್ರ, ಶಶಿಕಲಾ ಜೊಲ್ಲೆ ಸೇರಿದಂತೆ ಹಲವು ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು.
ಸಂಭ್ರಮ-ಸಡಗರ
ವಿಧಾನಸಭೆಗೆ ಆಯ್ಕೆಯಾದ ಸದಸ್ಯರಲ್ಲಿ ಸಂಭ್ರಮ ಸಡಗರ ಮನೆ ಮಾಡಿದ್ದು, ನಿನ್ನೆ ಪರಸ್ಪರ ಸಂತಸ ಹಂಚಿಕೊಂಡಿದ್ದ ಸದಸ್ಯರುಗಳು ಇಂದು ಸಹ ಸದನದ ಒಳಗೆ-ಹೊರಗೆ ಪರಸ್ಪರ ಅಭಿನಂದನೆ, ಉಭಯಕುಶಲೋಪರಿ ನಡೆಸಿದರು.
ಸದನದ ಮೊಗಸಾಲೆಯಲ್ಲಿ ಶಾಸಕರುಗಳು ಕುಳಿತು ಚುನಾವಣೆ, ಮತಗಳ ಲೆಕ್ಕಾಚಾರ, ಗೆಲುವಿಗೆ ಹಾಕಿದ ಪರಿಶ್ರಮ ಎಲ್ಲದರ ಬಗ್ಗೆಯೂ ಮಾತನಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಇಂದು ಸದನಕ್ಕೆ ಆಗಮಿಸಿದ ಹಲವು ಸದಸ್ಯರು ವಿಧಾನಸೌಧದ ಮೆಟ್ಟಿಲುಗಳಿಗೆ ತಲೆಯಿಟ್ಟು ನಮಸ್ಕರಿಸಿದರು.