2ನೇ ಅಲೆ ತಡೆಗೆ ಕಠಿಣ ನಿಯಮ ಜಾರಿ

ಬೆಂಗಳೂರು, ಏ.೪- ರಾಜ್ಯದಲ್ಲಿ ಕೊರೊನಾ ೨ನೇ ಅಲೆಯನ್ನು ತಡೆಯಲು ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಯಾರನ್ನೊ ಮೆಚ್ಚಿಸಲು ತೀರ್ಮಾನಗಳನ್ನು ಬದಲಿಸಲು ಸಾಧ್ಯವಿಲ್ಲ. ನಮಗೆ ಜನರ ಆರೋಗ್ಯ ಮುಖ್ಯ. ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರಿಗೆ ನಾನು ಖಳನಾಯಕನಾಗಿ ಕಾಣಿಸುತ್ತಿದ್ದೇನೆ. ನನಗೆ ಜನರ ಆರೋಗ್ಯ ರಕ್ಷಣೆಯೇ ಮುಖ್ಯ. ಆರೋಗ್ಯ ಸಚಿವನಾಗಿ ಅಂತಃಕರಣದಿಂದ ಕೆಲಸ ಮಾಡುತ್ತಿದ್ದೇವೆ. ಯಾರನ್ನೋ ಮೆಚ್ಚಿಸಲು ನಿಯಮಗಳನ್ನು ಸಡಿಲಿಸುವುದಿಲ್ಲ ಎಂದರು.
ಚಿತ್ರರಂಗದ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮೂರು ದಿನ ಥಿಯೇಟರ್ ರೂಲ್ಸ್‌ಗಳನ್ನು ಮುಂದೂಡಿದ್ದಾರೆ. ಇದು ತಪ್ಪು ಎಂದು ಹೇಳುವುದಿಲ್ಲ. ಅವರಿಗೂ ಒತ್ತಡ ಬಂದಿದೆ. ಹಾಗಾಗಿ, ಸ್ಪಂದಿಸಿದ್ದಾರೆ ಎಂದ ಅವರು, ಹಾಗಂತ ಎಲ್ಲರಿಗೂ ರಿಯಾಯಿತಿ ಕೊಡಲು ಸಾಧ್ಯವಿಲ್ಲ. ಶಿಕ್ಷಣ ಸಂಸ್ಥೆಗಳು, ಚಿತ್ರರಂಗದ ಅಭಿಮಾನಿಗಳು ಜಿಮ್ ಮಾಲೀಕರಿಂದ ಒತ್ತಡ ಬಂದಿದೆ ಏನು ಮಾಡಲು ಸಾಧ್ಯವಿಲ್ಲ ಎಂದರು.
ಜನರ ಜೀವನೋಪಾಯ ಎರಡೂ ಮುಖ್ಯ. ಹಾಗಾಗಿ, ಯಾವುದೇ ಟೀಕೆಗಳಿಗೆ ಬೇಸರಿಸಿಕೊಳ್ಳಲು ಜನರ ಆರೋಗ್ಯ ಕಾಪಾಡುವುದಕ್ಕೆ ಆದ್ಯತೆ ಕೊಟ್ಟಿದ್ದೇನೆ. ಈಗ ಕಠಿಣಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.
ಚಿತ್ರ ನಿರ್ಮಾಪಕ ಕೆ. ಮಂಜು ಆರೋಗ್ಯ ಸಚಿವ ಸುಧಾಕರ್ ಅವರನ್ನು ಬದಲಿಸಿ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ ಅವರು, ಕೆ. ಮಂಜು ಯಾರು ಎಂಬುದೇ ನನಗೆ ಗೊತ್ತಿಲ್ಲ. ಆರೋಗ್ಯ ಸಚಿವನಾಗಿ ಏನು ಮಾಡಬೇಕೋ ಅದನ್ನೇ ಮಾಡಿದ್ದೇನೆ. ಜನರ ಆರೋಗ್ಯ ನನಗೆ ಮುಖ್ಯ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಮಹಾರಾಷ್ಟ್ರ ರಾಜ್ಯವೊಂದರಲ್ಲಿ ನಿನ್ನೆ ಒಂದೇ ದಿನ ೫೦ ಸಾವಿರ ಸೋಂಕು ಪ್ರಕರಣಗಳು ದಾಖಲಾಗಿ ೫೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲೂ ಈ ಪರಿಸ್ಥಿತಿ ಆಗದಂತೆ ನೋಡಿಕೊಳ್ಳಬೇಕಿದೆ. ಹಾಗಾಗಿ ಕಠಿಣಕ್ರಮ ಅನಿವಾರ್ಯ ಇಲ್ಲದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕುತ್ತೇವೆ ಎಂದರು.
ಮಹಾರಾಷ್ಟ್ರ ಪರಿಸ್ಥಿತಿ ನೋಡಿ ನಾವು ಎಚ್ಚೆತ್ತುಕೊಳ್ಳಬೇಕು. ಮಾಸ್ಕ್ ಕಡ್ಡಾಯಗೊಳಿಸುವುದರ ಜತೆಗೆ ಮಾಸ್ಕ್ ಹಾಕದವರಿಗೆ ದಂಡ ವಿಧಿಸಲೇಬೇಕು. ಕೇಂದ್ರ ಸರ್ಕಾರವೂ ಇದನ್ನೇ ಹೇಳಿದೆ. ದಂಡ ಹಾಕದಿದ್ದರೆ ಜನ ನಿಯಮ ಪಾಲಿಸುವುದಿಲ್ಲ ದಂಡ ಕಟ್ಟಬೇಕಾಗುತ್ತದೆ ಎಂಬ ಭಯ ಇರಬೇಕು ಎಂದರು.
ರಾಜ್ಯದಲ್ಲಿ ಇದುವರೆಗೂ ೪೫ ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ. ನಿನ್ನೆ ಒಂದೇ ದಿನ ೨ ಲಕ್ಷ ೯೦ ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಅವರು ಹೇಳಿದರು.