2ತಿಂಗಳಲ್ಲಿ ;ವೈ’ ಆಕಾರದ ರಸ್ತೆ ಸಂಚಾರಕ್ಕೆ ಮುಕ್ತ

ಬೆಂಗಳೂರು, ನ.೧೦-ನಗರದ ಮಾಗಡಿ ರಸ್ತೆಯಿಂದ ಮೆಜಿಸ್ಟಿಕ್ ಓಕಳಿಪುರದ ಮಾರ್ಗವಾಗಿ ಬಿಬಿಎಂಪಿ ನಿರ್ಮಿಸುತ್ತೀರುವ “ವೈ” ಆಕಾರದ ಮೇಲ್ಸೇತುವೆ ಮುಂದಿನ ಎರಡು ತಿಂಗಳಿನಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
ಸದ್ಯಕ್ಕೆ ಮಾಗಡಿ ರಸ್ತೆ (ಹಳೆಯ ಮೈಸೂರು ರಸ್ತೆ) ಮಿನರ್ವ ಮಿಲ್ ಬಳಿ ಬಿಬಿಎಂಪಿಯ ಗ್ರೇಡ್ ಸಪರೇಟರ್ ಕಾಮಗಾರಿ ಆರಂಭವಾದ ಮೇಲಿಂದ ಈ ರಸ್ತೆಯಿಂದ ಮೆಜಿಸ್ಟಿಕ್ ಹೋಗಬೇಕೆಂದರೆ ವಾಹನ ಸವಾರರು ಸಂಕಷ್ಟ ಪರದಾಡುವಂತಾಗಿದೆ.
ಅದರಲ್ಲೂ, ಸುಜಾತ ಥಿಯೇಟರ್ ರಸ್ತೆಯಲ್ಲಿ ಸಂಚರಿಸಿ, ರಾಜಾಜಿನಗರ ಪ್ರವೇಶದ್ವಾರದ ಮೇಲ್ಭಾಗ ಯೂ ಟರ್ನ್ ಹೊಡೆದು ಓಕಳಿಪುರದ ಕಡೆಗೆ ಹೋಗಬೇಕಿತ್ತು. ಇದರಿಂದ ಒಂದೆರಡು ನಿಮಿಷದಲ್ಲಿ ಸಾಗಬೇಕಾದ ಹಾದಿ ವಾಹನ ದಟ್ಟಣೆ ಅವಧಿಯಲ್ಲಿ ೫-೧೦ ನಿಮಿಷದಿಂದ ಕಾಲುಗಂಟೆ ಆಗುತ್ತಿತ್ತು. ಇದರಿಂದ ವಾಹನ ಸವಾರರಂತೂ ಹೈರಾಣಾಗಿದ್ದಾರೆ.
ಒಟ್ಟಾರೆ, ಮಾಗಡಿ ರಸ್ತೆಯಿಂದ ಮೆಜಿಸ್ಟಿಕ್ ಓಕಳಿಪುರದ ಕಡೆಗೆ ೩೯೦ ಮೀಟರ್ ಫ್ಲೈಓವರ್ ಸೇರಿದಂತೆ ೫೨೦ ಮೀಟರ್ ಗ್ರೇಡ್ ಸಪರೇಟರ್ ಹಾಗೂ ಓಕಳಿಪುರ ನಿಂದ ರಾಜಾಜಿನಗರದ ಕಡೆಗೆ ಸಂಚರಿಸುವ ೪೨೦ ಮೀಟರ್ ಕೆಳಸೇತುವೆ ಕಾಮಗಾರಿ ೨೦೧೯ ಏಪ್ರಿಲ್ ನಲ್ಲಿ ಪ್ರಾರಂಭವಾಗಿತ್ತು.೨೦೨೦ಕ್ಕೆ ಮೇಲ್ಸೇತುವೆ ಹಾಗೂ ಕಳಸೇತುವೆ ಕಾಮಗಾರಿ ಸಂಪೂರ್ಣವಾಗಬೇಕಿತ್ತು. ಆದರೆ ಎರಡು ವರ್ಷ ತಡವಾದರೂ ೩೩ ಕೋಟಿ ರೂ. ಯೋಜನೆ ಸಮಯಕ್ಕೆ ಸರಿಯಾಗಿ ಮುಗಿದಿಲ್ಲ.ಅದರೆ, ಬರೋಬ್ಬರಿ ಎರಡು ವರ್ಷದ ಬಳಿಕ ಈ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ) ರವೀಂದ್ರ, ೨೦೧೬-೧೭ರ ನಗರೋತ್ಥಾನ ಅನುದಾನದಡಿ ೩೩ ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಆದರೆ ಮುಂದಿನ ವರ್ಷ ಜನವರಿ ೨೦೨೩ರ ವೇಳೆಗೆ ಈ ಮೇಲ್ಸೇತುವೆ ಸಾರ್ವಜನಿಕ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು.