2ಎ ಸೇರ್ಪಡೆಗಾಗಿ ಪಂಚಮಸಾಲಿ ಸಮಾಜದಿಂದ ಎತ್ತಿನಬಂಡಿಗಳ ಮೂಲಕ ಪ್ರತಿಭಟನೆ

ಕಲಬುರಗಿ.ಸೆ.15: ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವಂತೆ ಹಾಗೂ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ರಾಜ್ಯವ್ಯಾಪಿ ಕರೆಯ ಮೇರೆಗೆ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ್ ಸ್ವಾಮೀಜಿ ಅವರ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಎತ್ತಿನ ಬಂಡಿಗಳ ಮೂಲಕ ಪ್ರತಿಭಟನಾ ಮೆರವಣಿಗೆ ಮಾಡಿದರು.

ಈ ಸಂದರ್ಭದಲ್ಲಿ ಜಯಮೃತ್ಯುಂಜಯ್ ಸ್ವಾಮೀಜಿ ಮಾತನಾಡಿ, ಈಗಾಗಲೇ ಎರಡು ಬೇಡಿಕೆಗಳ ಇಡೇರಿಕೆಗೆ ಸೆಪ್ಟೆಂಬರ್ 15ರವರೆಗೆ ಗಡುವು ನೀಡಲಾಗಿತ್ತು. ಆ ಗಡುವು ಮುಗಿದ ಕಾರಣ ರಾಜ್ಯಾದ್ಯಂತ ಎತ್ತಿನ ಬಂಡಿಗಳ ಮೂಲಕ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಹಿಂದೆ ರಾಜ್ಯವ್ಯಾಪಿ ಪ್ರಬಲ ಹೋರಾಟ ಮಾಡಿದಾಗ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭರವಸೆ ನೀಡಿದ್ದರು. ಸೆಪ್ಟೆಂಬರ್ 15ರೊಳಗೆ ಕ್ರಮ ಕೈಗೊಳ್ಳುವ ಭರವಸೆಯನ್ನೂ ಸಹ ಕೊಟ್ಟಿದ್ದರು. ಆದಾಗ್ಯೂ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೊಟ್ಟ ಭರವಸೆಯನ್ನು ಇಡೇರಿಸಲು ಉತ್ತಮ ಅವಕಾಶ ಇದೆ. ಕೂಡಲೇ ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಬೇಕು ಎಂದು ಒತ್ತಾಯಿಸಿದ ಅವರು, ಒಂದು ವೇಳೆ ಬೇಡಿಕೆಗೆ ಸ್ಪಂದಿಸದೇ ಹೋದಲ್ಲಿ ಅಕ್ಟೋಬರ್ 1ರಂದು ಮಾಜಿ ಮುಖ್ಯಮಂತ್ರಿ ದಿ. ಜೆ.ಎಚ್. ಪಟೇಲ್ ಅವರ ಜನ್ಮ ದಿನದ ಕಾರ್ಯಕ್ರಮ ಮುಗಿದ ನಂತರ ಬೆಂಗಳೂರಿನ ಫ್ರೀಡಮ್ ಪಾರ್ಕ್‍ನಲ್ಲಿ ಸಮಾಜದ ವತಿಯಿಂದ ಧರಣಿ ಸಹ ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದರು.
ಹೋರಾಟವನ್ನು ಹತ್ತಿಕ್ಕುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ನಮ್ಮದೇನಿದ್ದರೂ ಸಮಾಜವನ್ನು 2ಎಗೆ ಸೇರಿಸುವುದು ಅಷ್ಟೇ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಕಲ್ಯಾಣರಾವ್ ಪಾಟೀಲ್, ನಟರಾಜ್, ಬಿ.ಎಸ್. ಪಾಟೀಲ್ ನಾಗರಾಳ್ ಹುಲಿ, ರಾಜಶೇಖರ್ ಪಾಟೀಲ್, ರುದ್ರಗೌಡ ಪಾಟೀಲ್, ಮಲ್ಲಿಕಾರ್ಜುನ್ ಹಿರೇಕೊಪ್ಪ ಮುಂತಾದವರು ಪಾಲ್ಗೊಂಡಿದ್ದರು.