2ಎ ಮೀಸಲಾತಿ ಕಲಿಸಲು ಆಗ್ರಹ

ಬ್ಯಾಡಗಿ, ಅ 29- ರಾಜ್ಯದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ವೀರಶೈವ ಪಂಚಮಸಾಲಿ ಸಮಾಜವನ್ನು ರಾಜ್ಯ ಸರಕಾರ ಹಿಂದುಳಿದ 2ಎ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ತಾಲೂಕಾ ವೀರಶೈವ ಪಂಚಮಸಾಲಿ ಸಮಾಜದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಹಶೀಲ್ದಾರ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
ಪಟ್ಟಣದ ತಾಲೂಕಾ ಪಂಚಾಯತ ಆವರಣದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ನ್ಯಾಯವಾದಿ ಡಿ.ಎಚ್.ಬುಡ್ಡನಗೌಡರ ರಾಜ್ಯದಲ್ಲಿ ಸುಮಾರು 80 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯವು ಆರ್ಥಿಕವಾಗಿ. ಸಾಮಾಜಿಕವಾಗಿ ಮುಂದೆ ಬರಬೇಕಾದಲ್ಲಿ 2ಎ ವರ್ಗಕ್ಕೆ ಸೇರಿಸುವುದು ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವ ಮೂಲಕ ಪಂಚಮಸಾಲಿ ಸಮಾಜಕ್ಕೆ ಪ್ರಾಶಸ್ತ್ಯವನ್ನು ನೀಡಬೇಕೆಂದು ಆಗ್ರಹಿಸಿದರು.
ತಾಲೂಕಾ ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷ ಶಂಭಣ್ಣ ದಾನಪ್ಪನವರ ಮಾತನಾಡಿ, ಈಗಾಗಲೇ ಪಂಚಮಸಾಲಿ ಸಮಾಜವನ್ನು ಹಿಂದುಳಿದ 3ಬಿ ವರ್ಗಕ್ಕೆ ಸೇರಿಸಿದ್ದರೂ ಕೂಡ ಅಗತ್ಯ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅಸಾಧ್ಯವಾಗಿದೆ. ಪಂಚಮಸಾಲಿ ಸಮಾಜವು ಸಮಗ್ರವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಿಂದುಳಿದ 2ಎ ವರ್ಗಕ್ಕೆ ಪಂಚಮಸಾಲಿ ಸಮಾಜವನ್ನು ಸೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಾಜ ಧುರೀಣರಾದ ಶಿವರಾಜ ಹರಮಗಟ್ಟಿ, ಪಿ.ಬಿ.ಶಿಂಗಿ, ಶೇಖರಗೌಡ ಗೌಡ್ರ, ಉಮೇಶ್ ಚೌದರಿ, ಶಿವಯೋಗಿ ಗಡಾದ. ವೀರಭದ್ರಗೌಡ ಹೊಂಬರಡಿ, ರಾಜು ಹೊಮ್ಮರಡಿ, ಅರುಣ ಪಾಟೀಲ, ಮಲ್ಲಣ್ಣ ಯರಗಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.