2ಎ, ಮೀಸಲಾತಿಗೆ ಸಿಎಂ ಮನೆ ಎದರು ಸೆ.20ರಂದು ಸತ್ಯಾಗ್ರಹ

ಬ್ಯಾಡಗಿ,ಸೆ.18: ಮುಖ್ಯಮಂತ್ರಿಗಳು ಹಲವು ಬಾರಿ ಭರವಸೆಯ ಮೂಲಕ ಪಂಚಮಸಾಲಿ ಸಮಾಜಕ್ಕೆ
2ಎ, ಮೀಸಲಾತಿಯನ್ನು ನೀಡುವುದಾಗಿ ನಮ್ಮನ್ನು ಹೋರಾಟದಿಂದ ವಿಮುಖಗೊಳಿಸಿದ್ದು, ಈವರೆಗೂ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಇರುವುದರಿಂದ ಮುಖ್ಯಮಂತ್ರಿಗಳ ಮನೆಯ ಎದುರು ಸೆ.20ರಂದು ಸತ್ಯಾಗ್ರಹವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಕೂಡಲಸಂಗಮದ ಜಯಮೃತ್ಯುಂಜಯಶ್ರೀಗಳು ಹೇಳಿದರು.
ಪಟ್ಟಣದ ಗಡಾದ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ, ಮೀಸಲಾತಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಐತಿಹಾಸಿಕ ಪಾದಯಾತ್ರೆಯನ್ನು ನಡೆಸುವ ಮೂಲಕ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ 23ದಿನಗಳ ಕಾಲ ಸತ್ಯಾಗ್ರಹವನ್ನು ಮಾಡಿದರೂ ಸಹ ಈವರೆಗೂ ಸರ್ಕಾರ ಸ್ಪಂದಿಸದೇ ಇರುವುದು ಬಹು ದುರದೃಷ್ಟಕರ. ಈ ಹಿಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಸೆ.15ರೊಳಗಾಗಿ ಮೀಸಲಾತಿಯನ್ನು ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ನಂತರದ ದಿನಗಳಲ್ಲಿ ಅವರು ಅಧಿಕಾರದಿಂದ ನಿರ್ಗಮಿಸಿದರು. ತದನಂತರ ಬಸವರಾಜ ಬೊಮ್ಮಾಯಿ ಅವರು ಅಧಿಕಾರಕ್ಕೆ ಬಂದ ಮೇಲೆ ಅವರು ನಾಲ್ಕೈದು ಬಾರಿ ಮಾತು ಕೊಡುವುದು ಕಾಲಾವಾಕಾಶ ಕೇಳುವುದನ್ನು ಮಾಡಿದರು. ನಾವು ಸಹ ಅದಕ್ಕೆ ಒಪ್ಪಿ ಹೋರಾಟವನ್ನು ಕೈಬಿಟ್ಟರೂ ಈವರೆಗೂ ಮೀಸಲಾತಿಯನ್ನು ಕೊಡಲು ಆಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯ ಮುಂದೆಯೇ ಸೆ.20ರಿಂದ ಸತ್ಯಾಗ್ರಹವನ್ನು ನಡೆಸಲು ತಿರ್ಮಾನಿಸಲಾಗಿದ್ದು, ಯಾವುದೇ ಕಾರಣಕ್ಕೂ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲವೆಂದು ಖಡಾಖಂಡಿತವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಿ.ಆರ್.ಬಳ್ಳಾರಿ, ತಿರಕಪ್ಪ ಮರಬಸಣ್ಣನವರ, ಶಿವಯೋಗಿ ಗಡಾದ, ಶೇಖರಗೌಡ ಗೌಡ್ರ, ಶಿವಯೋಗೆಪ್ಪ ಉಕ್ಕುಂದ, ಮರಡೆಪ್ಪ ಹೆಡಿಯಾಲ, ದಯಾನಂದ ಉಳ್ಳಾಗಡ್ಡಿ, ಮಂಜು ಬಾಳಿಕಾಯಿ, ಬಸಪ್ಪ ಚಿಕ್ಕಣಜಿ, ಜ್ಯೋತಿ ಕುದರಿಹಾಳ, ಗೀತಾ ಬೂದಿಹಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.