2ಎ ಮೀಸಲಾತಿಗೆ ಇತರೆ ಸಮುದಾಯ ಸೇರ್ಪಡೆ ಬೇಡ

ಕೋಲಾರ, ಮಾ.೨೫: ಹಿಂದುಳಿದ ವರ್ಗಗಳ ೨ಎ ಮೀಸಲಾತಿ ಪಟ್ಟಿಗೆ ಇತರೆ ಸಮುದಾಯಗಳನ್ನು ಸೇರಿಸಬಾರದೆಂದು ಒತ್ತಾಯಿಸಿ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಮಾ.೨೮ ರಂದು ನಗರದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ತಿಳಿಸಿದರು.
ನಗರದ ದೇವರಾಜ ಅರಸು ಭವನದಲ್ಲಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ನಡೆದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿವನದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾ.೨೮ ಭಾನುವಾರ ಬೆಳಗ್ಗೆ ೧೦.೩೦ಗಂಟೆಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಧರಣಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಭಾಪತಿ ಸುದರ್ಶನ್ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಬಲ ನಾಯಕರು ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು.
ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದುವರಿದಿರುವ ಪ್ರಬಲ ಸಮುದಾಯಗಳನ್ನು ಪ್ರವರ್ಗ ೨ಎಗೆ ಸೇರಿಸುವ ಹುನ್ನಾರ ನಡೆಯುತ್ತಿದೆ. ಪ್ರಬಲ ಸಮುದಾಯಗಳನ್ನು ೨ಎಗೆ ಸೇರಿಸಿದರೆ, ಉಗ್ರ ಹೋರಾಟ ಹಾಗೂ ನ್ಯಾಯಾಲಯದ ಮೊರೆ ಹೋಗಲಾಗುತ್ತದೆ ಎಂದು ಎಚ್ಚರಿಸಿದರು.
ಕೋಲಾರ ಜಿಲ್ಲೆಯಿಂದ ಪ್ರಾರಂಭವಾಗುವ ಹೋರಾಟವು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು. ಯಡಿಯೂರಪ್ಪ ಸರ್ಕಾರ ಬಜೆಟ್ ನಲ್ಲಿ ಹಿಂದುಳಿದ ಜಾತಿಗಳ ನಿಗಮಗಳಿಗೆ ಕಡಿಮೆ ಅನುದಾನವನ್ನು ನೀಡಿದೆ ಹಾಗೂ ವಿದ್ಯಾರ್ಥಿ ವೇತನವನ್ನು ಕಳೆದ ವರ್ಷ ನೀಡಿಲ್ಲ. ನಿಗಮಗಳಿಗೆ ಹೆಚ್ಚು ಅನುದಾನ ಮತ್ತು ಕಳೆದ ವರ್ಷದ ವಿದ್ಯಾರ್ಥಿ ವೇತನವನ್ನು ಸೇರಿ ಈ ವರ್ಷದ ಸ್ಕಾಲರ್ಶಿಪ್ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಎಂ.ರಾಮಚಂದ್ರಪ್ಪ, ರಾಜ್ಯ ಕುರುಬರ ಸಂಘದ ನಿರ್ದೇಶಕ ಆಂಜನಿ ಸೋಮಣ್ಣ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಪ್ರಸಾದ್ ಬಾಬು ಹಾಗೂ ಪದಾಧಿಕಾರಿಗಳಾದ ಕಲಾವಿದ ವಿಷ್ಣು, ಪಾಲ್ಗುಣ, ವೆಂಕಟಗಿರಿಯಪ್ಪ, ಜೆ.ಕೆ.ಜಯರಾಮ್, ಕುಮಾರ್, ನಾಗಭೂಷಣ್, ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.