2ಎ ಮೀಸಲಾತಿಗೆ ಆಗ್ರಹಿಸಿ ಜ.14 ಬೆಂಗಳೂರಿಗೆ ಪಾದಯಾತ್ರೆ

ಬೆಂಗಳೂರು, ಜ.8- ಪಂಚಮಸಾಲಿ ಸಮುದಾಯಕ್ಕೆ 2ಎ ಹಾಗೂ ಲಿಂಗಾಯತ ಸಮುದಾಯಗಳಿಗೆ ಕೇಂದ್ರದ ಒಬಿಸಿ ಮೀಸಲಾತಿ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಗಳಿಗೆ ಸರ್ಕಾರದ ನಿರ್ಲ ಕ್ಷ್ಯತೆ ಖಂಡಿಸಿ ಜ.14ರ ಮಕರ ಸಂಕ್ರಾಂತಿ ದಿನದಂದು ಕೂಡಲ ಸಂಗಮದಿಂದ ಬೆಂಗಳೂರಿಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಸಮುದಾಯದ ಇತಿಹಾಸದಲ್ಲೇ ಇದೊಂದು ಬೃಹತ್ ಪಾದಯಾತ್ರೆಯಾಗಲಿದೆ. ಸುಮಾರು 700 ಕಿ.ಮೀ. ಪಾದಯಾತ್ರೆಯನ್ನು ಸಮುದಾಯದ ಹಕ್ಕೊತ್ತಾಯಗಳಿಗಾಗಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಬಹುಸಂಖ್ಯಾತ ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಸಮಾಜವು ಕೃಷಿಯನ್ನೇ ನಂಬಿ ಬದುಕುತ್ತಿದೆ. ಶೇ.95ರಷ್ಟು ಬಡವರೇ ಇದ್ದಾರೆ.

ಸಮುದಾಯದ ಸಮಗ್ರ ಅಭಿವೃದ್ಧಿಗೆ 2ಎ ಮೀಸಲಾತಿ ಹಾಗೂ ಎಲ್ಲ ಬಡ ಲಿಂಗಾಯಿತರಿಗೆ ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿ ಕಲ್ಪಿಸಬೇಕು ಎಂದು ಕಳೆದ 20 ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಆದರೆ, ಈವರೆಗೆ ನಮ್ಮ ಹೋರಾಟಕ್ಕೆ ಯಾವುದೇ ಫಲ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಒಂದು ತಿಂಗಳ ಕಾಲ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದರು.
ಸಮುದಾಯದ ಎಲ್ಲ ಬಾಂಧವರು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಬಂದು ಕೂಡಲ ಸಂಗಮದಲ್ಲಿ ಸೇರಬೇಕು. ಈ ಪಾದಯಾತ್ರೆ ಬೆಂಗಳೂರಿನಲ್ಲಿ ಪಾದಯಾತ್ರೆ ಅಂತ್ಯಗೊಳ್ಳಲಿದ್ದು, ಅಂದು 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಹೇಳಿದರು.