ಗುಡುಗು ಸಹಿತ ಮಳೆ: ಮನೆಗೆ ಹಾನಿ

ಮಂಗಳೂರು, ಮಾ.೩೦- ಕರಾವಳಿಯಲ್ಲಿ ಅಕಾಲಿಕವಾಗಿ ಗುಡುಗು ಸಹಿತ ಗಾಳಿ ಮಳೆ ಸುರಿದಿದ್ದು, ನಗರದ ಕೃಷ್ಣನಗರದಲ್ಲಿ ಮಳೆಗೆ ಮನೆಯೊಂದಕ್ಕೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ.
ಇಲ್ಲಿನ ಬೋಂದೆಲ್ ಸಮೀಪದ ಕೃಷ್ಣನಗರ ಎಂಬಲ್ಲಿ ಮಳೆಯ ಆರ್ಭಟಕ್ಕೆ ಉಂಟಾದ ನೆರೆಯಿಂದಾಗಿ ಮನೆಗೆ ಹಾನಿಯಾಗಿದೆ ಎನ್ನಲಾಗಿದೆ. ಮನೆ ಮಂದಿ ಅಪಾಯದಿಂದ ಪಾರಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಯುವಕರ ತಂಡ, ಸ್ಥಳೀಯ ಕಾರ್ಪೊರೇಟರ್, ಪೊಲೀಸರು ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳೂರು ನಗರ ಮಾತ್ರವಲ್ಲದೆ ಗ್ರಾಮಾಂತರ ಭಾಗದಲ್ಲೂ ಭಾರೀ ಮಳೆಯಾಗಿದೆ. ಹಲವೆಡೆ ಹಾನಿಯುಂಟಾಗಿದೆ. ವಿದ್ಯುತ್ ವ್ಯತ್ಯಯವಾಗಿರುವ ಬಗ್ಗೆಯೂ ಕೂಡ ವರದಿಯಾಗಿದೆ. ಇನ್ನು ರಾತ್ರಿ ಸುಮಾರು ೯ ಗಂಟೆಯ ಹೊತ್ತಿನಲ್ಲಿ ಏಕಾಏಕಿ ಮಳೆ ಸುರಿದಿದೆ. ಗಾಳಿ ಸಹಿತ ಸುರಿದ ಭಾರಿ ಮಳೆಗೆ ಜನ ಸಂಚಾರ, ವಾಹನ ಸಂಚಾರಕ್ಕೂ ಅಡ್ಡಿಯುಂಟಾಗಿದೆ.