195 ಮತದಾರರಿಂದ ಮತದಾನ


ಬ್ಯಾಡಗಿ,ಏ.28: ಮುಂಬರುವ ಮೇ.7ರಂದು ನಡೆಯಲಿರುವ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಶನಿವಾರದಂದು ಪಟ್ಟಣದಲ್ಲಿ ಅಶಕ್ತ ಹಿರಿಯ ನಾಗರಿಕರು ಹಾಗೂ ವಿಕಲಚೇತನರ ಮನೆಗಳಿಗೆ ತೆರಳಿ ಅವರಿಂದ ಮತದಾನ ಮಾಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಒಂದೇ ದಿನದಲ್ಲಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದ 202 ಮತದಾರರ ಪೈಕಿ 195 ಮತದಾರರು ಮತದಾನ ಮಾಡಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಮಮತಾ ಹೊಸಗೌಡ್ರ ತಿಳಿಸಿದರು.
ಪಟ್ಟಣದ ನಿಸರ್ಗನಗರದ ನಿವಾಸಿ 106 ವರ್ಷದ ವಯೋವೃದ್ದೆ ಖಾದರಬಿ ಪಠಾಣ್ ಅವರ ಮನೆಗೆ ತೆರಳಿ ಅವರ ಒಪ್ಪಿಗೆಯನ್ನು ಪಡೆದು ಅವರಿಂದ ಮತದಾನ ಮಾಡಿಸುವ ಮೂಲಕ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿ 23 ಮತದಾರರು ಸೇರಿದಂತೆ ಬ್ಯಾಡಗಿ ವಿಧಾನಸಭಾ ಮತಕ್ಷೇತ್ರದಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಲು ಸಾಧ್ಯವಾಗದ ಒಟ್ಟು 202 ಅಶಕ್ತ ಮತದಾರರನ್ನು ಗುರುತಿಸಲಾಗಿದ್ದು, ಅವರ ಮನೆಗಳಿಗೆ ಶನಿವಾರದಿಂದ ಸೋಮವಾರದವರೆಗೆ (ಎಪ್ರಿಲ್ 27ರಿಂದ 29) ಮೂರು ದಿನಗಳ ಕಾಲ ತೆರಳಿ 85 ವರ್ಷದ ಮೇಲ್ಪಟ್ಟ ವಯೋವೃದ್ಧರು ಹಾಗೂ ವಿಕಲ ಚೇತನರಿಂದ ಸೆಕ್ಟರ್ ಅಧಿಕಾರಿ ಸೇರಿದಂತೆ ಒಟ್ಟು 6ಜನರ ತಂಡವು ಮತದಾನ ಮಾಡಿಸುವ ಕಾರ್ಯದಲ್ಲಿ ತೊಡಗಿದೆ. ಈಗಾಗಲೇ ಪ್ರಾರಂಭದ ಮೊದಲ ದಿನದಲ್ಲಿಯೇ 202 ಮತದಾರರ ಪೈಕಿ 195 ಮತದಾರರು ಮತದಾನ ಮಾಡಿದ್ದಾರೆ. ಇನ್ನುಳಿದ ಏಳು ಮತದಾರರಲ್ಲಿ ನಾಲ್ವರು ನಿಧನರಾಗಿದ್ದು, ಇನ್ನು ಮೂರು ಮತದಾರರ ಮತದಾನ ಮಾಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪಟ್ಟರಾಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಕೋಟಿ, ಸೆಕ್ಟರ್ ಅಧಿಕಾರಿಗಳಾದ ವೈ.ಕೆ.ಮಟಗಾರ, ಡಿ.ಎಫ್.ಕರಿಯಣ್ಣನವರ, ಕೆ.ಟಿ.ಪ್ರಕಾಶ, ಕೆ.ಎಲ್.ಕಜ್ಜಿ, ಪಿ.ಎಚ್.ಸೋಮಯ್ಯ, ನಾಗರಾಜ ಗೂಳೇರ, ಮಾಲತೇಶ ಹಳ್ಳಿ, ಗುಂಡಪ್ಪ ಹುಬ್ಬಳ್ಳಿ, ಎಎಸ್‍ಐ ಬಸವರಾಜ ಅಂಜುಟಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.