1948 ರ ಮಳ್ಳಿ ಹತ್ಯಾಕಾಂಡರಜಾಕಾರ ದಾಳಿಯ ಕರಾಳ ಅಧ್ಯಾಯ

-ವಿಜಯೇಂದ್ರ ಕುಲಕರ್ಣಿ
ಕಲಬುರಗಿ ಸೆ 16 : ಅದೇ ಆಗ ಭಾರತ ದೇಶ ಸ್ವತಂತ್ರವಾಗಿತ್ತು.ಹೈದರಾಬಾದಿನ ನಿಜಾಮ ಮೀರ್ ಉಸ್ಮಾನ್ ಅಲಿ ಸಂಸ್ಥಾನದ ಬಹುಜನರ ಅಭಿಪ್ರಾಯವನ್ನು ವಿರೋಧಿಸಿ ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ. ಆ ಸಂದರ್ಭದಲ್ಲಿ ಇಡೀ ಹೈದರಾಬಾದ ಪ್ರಾಂತ್ಯ ಕುದಿಪಾತ್ರೆಯಂತಾಯಿತು.ಭಾರತದೊಡನೆ ವಿಲೀನಗೊಳ್ಳುವ ಉದ್ದೇಶದಿಂದ ಹೈದರಾಬಾದ ಪ್ರಜೆಗಳು ಅಹಿಂಸಾತ್ಮಕ ಚಳುವಳಿ ಪ್ರಾರಂಭಿಸಿದರು. ಇದರ ನೇತೃತ್ವವನ್ನು ಸಂಸ್ಥಾನದ ಕಾಂಗ್ರೆಸ್ ಮುಖಂಡರಾದ ಸ್ವಾಮಿ ರಮಾನಂದ ತೀರ್ಥರು ವಹಿಸಿದರು. ಈ ಚಳುವಳಿಯನ್ನು ಹೊಸಕಿಹಾಕಲು ನಿಜಾಮನು ತನ್ನ ಪೆÇಲೀಸ್ ಬಲವನ್ನು ಅತ್ಯಂತ ನಿರ್ದಯವಾಗಿ ಉಪಯೋಗಿಸಿದನು. ಇದಲ್ಲದೆ ತನ್ನ ವಿರೋಧಿಗಳನ್ನು ಸಂಪೂರ್ಣ ನಾಶ ಮಾಡಲು ಕಾಸಿಂ ರಜವಿ ಎಂಬ ಮತಾಂಧನ ನೇತೃತ್ವದಲ್ಲಿ ರಜಾಕಾರ ( ಸ್ವಯಂಸೇವಕ) ಹೆಸರಿನ ಭಯೋತ್ಪಾದಕರ ಪಡೆಯನ್ನು ಕೂಡಾ ಅಸಹಾಯಕ ಪ್ರಜೆಗಳ ಮೇಲೆ ದಾಳಿಗಿಳಿಸಿದನು. ಕಾಸಿಂ ರಜವಿ ಈಗಿನ ಮಹಾರಾಷ್ಟ್ರದ ಲಾತೂರಿನಲ್ಲಿ ಒಬ್ಬ ವಕೀಲನಾಗಿದ್ದ.ರಜಾಕಾರರು ಹೈದರಾಬಾದ್ ಪ್ರಾಂತದಲ್ಲಿ ಸಾವಿರಾರು ಜನ ಅಮಾಯಕರ ಮೇಲೆ ದಾಳಿಯಿಟ್ಟು ಕೊಲೆ, ಲೂಟಿ, ಅತ್ಯಾಚಾರದ ದೌರ್ಜನ್ಯ ನಡೆಸಿದರು.
ಕರಾಳ ಅಧ್ಯಾಯ:
1948 ರ ಸೆಪ್ಟೆಂಬರ್ 9 ನೆಯ ತಾರೀಖು.ಈಗಿನ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದ ಇತಿಹಾಸದ ಕರಾಳ ಅಧ್ಯಾಯ. ವಾಹನವೇರಿ ಬಂದ ಸಶಸ್ತ್ರಧಾರಿ ರಜಾಕಾರರು ಮಳ್ಳಿ ಕೃಷ್ಣರಾವ ( ಕಿಶನ್ ರಾವ್ ) ದೇಶಪಾಂಡೆ ಎಂಬ ವಿದ್ಯಾರ್ಥಿ ಸತ್ಯಾಗ್ರಹಿಯ ತಂದೆ ಮಹಿಪತಿರಾಯ, ಚಿಕ್ಕಪ್ಪ ರಾಮರಾಯ, ಅಣ್ಣ ನಾರಾಯಣರಾಯ ಹಾಗೂ ತಮ್ಮ ಗುರುರಾಯ ಅವರನ್ನು ಮನೆಯಂಗಳದಲ್ಲಿಯೇ ಗುಂಡಿಟ್ಟು ಕೊಂದು ಹಾಕಿದರು. ಇದಲ್ಲದೇ ಊರಲ್ಲಿ ಸಿದ್ಧರಾಮ ಲಕ್ಕೊಂಡ,ಶೇಷಪ್ಪ ಪತ್ತಾರ,ಯಲ್ಲಪ್ಪ ಕುರುಬರ,ಬಸಲಿಂಗಪ್ಪ ಹರಿಜನ,ಹಳ್ಳೆಪ್ಪ,ನಾಗೋಜಿ,ಜಾನೋಜಿ ಹೀಗೆ 11 ಜನರನ್ನು ಕೊಂದು ಹಾಕಿದರು. ಮೂರ್ನಾಲ್ಕು ದಿನ ಶವಗಳು ಒಂದೇ ಕಡೆ ಬಿದ್ದಿದ್ದವು. ಊರಲ್ಲಿ ಸ್ಮಶಾನಮೌನ ನೆಲೆಸಿತ್ತು.ತೋಳಗಳು ಊರೊಳಗೆ ನಿರ್ಭಯವಾಗಿ ಅಡ್ಡಾಡಿಕೊಂಡಿದ್ದವು ಎಂದು ಹಿರಿಯ ತಲೆಮಾರಿನವರು ನೆನಪಿಸಿಕೊಳ್ಳುತ್ತಾರೆ.ಹೈದರಾಬಾದ ವಿಮೋಚನಾ ಚಳುವಳಿಯಲ್ಲಿ ಭಾಗಿಯಾಗಿದ್ದ ಮಳ್ಳಿ ಗ್ರಾಮದ ಹದಿಹರೆಯದ ಸತ್ಯಾಗ್ರಹಿ ಮುರಳೀಧರ ಹಣಮಂತರಾವ (ಪಟವಾರಿ) ಕುಲಕರ್ಣಿ ಸಮೀಪದ ಹಳ್ಳಿಯೊಂದರಲ್ಲಿ ರಜಾಕಾರರ ಗುಂಡಿಗೆ ಆಹುತಿಯಾದನು.