19 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು: ಖಾಸಗಿ ಶಾಲೆ ಸೀಲ್‍ಡೌನ್

ಕಲಬುರಗಿ,ಏ.03:ನಗರದ ಗಂಜ್ ಪ್ರದೇಶದಲ್ಲಿ ಇರುವ ಖಾಸಗಿ ಶಾಲೆಯೊಂದರ 19 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಂದು ವಾರದ ಮಟ್ಟಿಗೆ ಶಾಲೆಯನ್ನು ಸೀಲ್‍ಡೌನ್ ಮಾಡಲಾಗಿದೆ.
ಕಳೆದ ಬುಧವಾರ ಶಾಲೆಯ ಕೆಲ ವಿದ್ಯಾರ್ಥಿಗಳಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು, ಶಾಲೆಯ 12 ಸಿಬ್ಬಂದಿಗಳು, 7ರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಸೇರಿ ಒಟ್ಟು 505 ಜನರ ಮಾದರಿ ಸಂಗ್ರಹಿಸಲಾಗಿತ್ತು. ಅವರಲ್ಲಿ 19 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಂಕಿತ ವಿದ್ಯಾರ್ಥಿಗಳಲ್ಲಿ ಗಂಭೀರವಾದ ಲಕ್ಷಣಗಳು ಕಂಡುಬಂದಿಲ್ಲ. ಹೀಗಾಗಿ ಎಲ್ಲ ವಿದ್ಯಾರ್ಥಿಗಳಿಗೆ ಹೋಮ್ ಐಸೂಲೇಷನ್ ಮಾಡಲಾಗಿದ್ದು, ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ. ಯರ ಮೂಲದಿಂದ ಸೋಂಕು ತಗುಲಿದೆ ಎಂಬುದು ಪತ್ತೆಯಾಗಿಲ್ಲ.
ಸದ್ಯ, ಒಂದು ವಾರಗಳ ಕಾಲ ಶಾಲೆ ಸೀಲ್‍ಡೌನ್ ಮಾಡಲಾಗಿದೆ. ಸಂಪೂರ್ಣ ಶಾಲೆಯನ್ನು ಸ್ಯಾನಿಟೈಜ್ ಮಾಡಲಾಗುತ್ತಿದೆ. ಸೋಂಕಿತ ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದ ಕುಟುಂಬಸ್ಥರು, ಸ್ನೇಹಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಲಕ್ಷಣಗಳು ಕಂಡುಬಂದವರ ಮಾದರಿ ತಪಾಸಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ್ ಮಾಲಿ ಅವರು ತಿಳಿಸಿದ್ದಾರೆ.