19 ದಿನದಲ್ಲಿ ಕೊರೊನಾಗೆ ಬಲಿಯಾದವರು 75 ಸಾವಿರ ಮಂದಿ

ನವದೆಹಲಿ, ಮೇ.೨೦- ದೇಶದೆಲ್ಲೆಡೆ ಕೋವಿಡ್ ಎರಡನೇ ಅಲೆಯ ಅರ್ಭಟ ಮುಂದುವರೆದಿದ್ದು, ಮೇ ತಿಂಗಳ ಮೊದಲ ೧೯ ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ ೭೫ ಸಾವಿರದ ಗಡಿ ದಾಟಿದೆ ಎಂದು ವರದಿಯಾಗಿದೆ.
ಇದುವರೆಗಿನ ಗರಿಷ್ಠ ಸಾವು ಏಪ್ರಿಲ್‌ನಲ್ಲಿ ದಾಖಲಾಗಿತ್ತು. ಏಪ್ರಿಲ್‌ನಲ್ಲಿ ೪೯ ಸಾವಿರ ಮಂದಿ ಸೋಂಕಿಗೆ ಬಲಿಯಾಗಿದ್ದರು. ಇದಕ್ಕೂ ಹಿಂದಿನ ಮೂರು ತಿಂಗಳಲ್ಲಿ ದೇಶದಲ್ಲಿ ಸೋಂಕಿಗೆ ಸರಾಸರಿ ೬ ಸಾವಿರ ಮಂದಿ ಬಲಿಯಾಗಿದ್ದರು.
ಮೊದಲ ಅಲೆಯ ಉತ್ತುಂಗದ ವೇಳೆ ಅಂದರೆ, ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಗರಿಷ್ಠ ಅಂದರೆ, ೩೩ ಸಾವಿರ ಮಂದಿ ಒಂದೇ ತಿಂಗಳಲ್ಲಿ ಸೋಂಕಿಗೆ ಬಲಿಯಾಗಿದ್ದರು. ಇನ್ನು, ರಾಷ್ಟ್ರವ್ಯಾಪಿ ನಿನ್ನೆ ಹೊಸ ಪ್ರಕರಣಗಳ ಸಂಖ್ಯೆ ಅಲ್ಪ ಏರಿಕೆ ಕಂಡುಬಂದಿದ್ದು, ೨,೭೬,೪೭೬ಕ್ಕೇರಿದ್ದರೂ, ಸತತ ಮೂರನೇ ದಿನ ಹೊಸ ಪ್ರಕರಣಗಳ ಸಂಖ್ಯೆ ಮೂರು ಲಕ್ಷದ ಗಡಿಯೊಳಗೇ ಇದೆ. ೩೮೮೨ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಮತ್ತೊಂದೆಡೆ, ಮೇ ಮೊದಲ ವಾರಕ್ಕೆ ಹೋಲಿಸಿದರೆ, ಎರಡನೇ ಅಲೆ ಪೂರ್ವಾಭಿಮುಖವಾಗಿ ಸಾಗುತ್ತಿರುವುದು ಸ್ಪಷ್ಟವಾಗುತ್ತದೆ. ಬಹುತೇಕ ಪೂರ್ವ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೆ, ಪಶ್ಚಿಮ ರಾಜ್ಯಗಳಲ್ಲಿ ಮತ್ತು
ಕೇರಳ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ.
ಆದರೆ, ತಮಿಳುನಾಡು ಹಾಗೂ ಆಂಧ್ರ ಕರಾವಳಿಯಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಪೂರ್ವ ರಾಜ್ಯಗಳಾದ ಅಸ್ಸಾಂ, ಬಂಗಾಳ, ತ್ರಿಪುರಾ ಮತ್ತು ಒಡಿಶಾದಲ್ಲೂ ಪ್ರಕರಣಗಳು ಹೆಚ್ಚುತ್ತಿವೆ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡು ೩೪,೮೯೫ ಹೊಸ ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ತಲಾ ೩೦ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾದ ಕರ್ನಾಟಕ ಮತ್ತು ಮಹಾರಾಷ್ಟ್ರ ೨ ಹಾಗೂ ೩ನೇ ಸ್ಥಾನದಲ್ಲಿವೆ. ೧೪ ರಾಜ್ಯಗಳಲ್ಲಿ ಸಾವಿನ ಸಂಖ್ಯೆ ೧೦೦ಕ್ಕೂ ಅಧಿಕ ಇದೆ. ಮಹಾರಾಷ್ಟ್ರದಲ್ಲಿ ೫೯೪ ಹಾಗೂ ಕರ್ನಾಟಕದಲ್ಲಿ ೪೬೮ ಮಂದಿ ಕೋವಿಡ್ ಸಂಬಂಧಿ ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳಲ್ಲಿ ಉಲ್ಲೇಖಿಸಲಾಗಿದೆ.