181 ಮತಗಟ್ಟೆ ಸ್ಥಾಪನೆ: ಡಿ.ಸಿ ರಾಮಚಂದ್ರನ್

ಬೀದರ‌:ಎ.3: ‘ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾರ್ಯಕ್ಕೆ ಸನ್ನದ್ಧರಾರಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಪ್ರಕ್ರಿಯೆ ಆರಂಭಿಸಲು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬೀದರ್ ನಗರಸಭೆ ಪೌರಾಯುಕ್ತರು ಸೇರಿದಂತೆ ಇನ್ನಿತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

‘ಬೀದರ್ ನಗರಸಭೆಯ 35 ವಾರ್ಡ್‌ ಹಾಗೂ ಹುಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣ ಪಂಚಾಯಿತಿಯ 11ನೇ ವಾರ್ಡ್‌ಗೆ ಚುನಾವಣೆ ನಡೆಸಲು ಏಪ್ರಿಲ್‌ 8 ರಂದು ಚುನಾವಣಾ ಅಧಿಸೂಚನೆ ಹೊರಡಿಸ ಲಾಗುವುದು’ ಎಂದು ತಿಳಿಸಿದರು

‘ಏಪ್ರಿಲ್ 15 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಏ.16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಏ.19 ಕೊನೆಯ ದಿನವಾಗಿದೆ. ಏ.27ರಂದು ಮತದಾನ ಹಾಗೂ 30ರಂದು ಮತಗಳ ಎಣಿಕೆ ನಡೆಯಲಿದೆ’ ಎಂದು ಹೇಳಿದರು.

‘ಏಪ್ರಿಲ್ 8ರಿಂದ 30ರ ವರೆಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಚುನಾವಣಾ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.

‘ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ಹೆಸರು, ವಾರ್ಡ್‌ ಸಂಖ್ಯೆ ಮತ್ತು ಮೀಸಲಾತಿ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ಅಧಿಸೂಚನೆಯನ್ನು ಸ್ಥಳೀಯ ಸಂಸ್ಥೆಗಳ ಕಚೇರಿ ಮತ್ತು ಇನ್ನಿತರ ಮುಖ್ಯ ಸ್ಥಳಗಳಲ್ಲೂ ಪ್ರದರ್ಶಿಸಬೇಕು’ ಎಂದು ತಿಳಿಸಿದರು.

‘ಬೀದರ್ ನಗರಸಭೆ ವ್ಯಾಪ್ತಿಯಲ್ಲಿ 173 ಮತಗಟ್ಟೆಗಳು ಮತ್ತು 8 ಹೆಚ್ಚುವರಿ ಮತಗಟ್ಟೆಗಳು ಸೇರಿ ಒಟ್ಟು 181 ಮತಗಟ್ಟೆ ಹಾಗೂ ಹಳ್ಳಿಖೇಡ(ಬಿ) ಉಪ ಚುನಾವಣೆಯಲ್ಲಿ 1 ಮತಗಟ್ಟೆ ಸ್ಥಾಪಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ವಿಧಾನಸಭಾ ಮತದಾರರ ಪಟ್ಟಿಯನ್ನು ಪರಿಗಣಿಸಬೇಕು. ಒಂದು ವಾರ್ಡಿನ ಮತದಾರರು ಇನ್ನೊಂದು ವಾರ್ಡಿನ ಮತದಾರರ ಪಟ್ಟಿಗೆ ಸೇರ್ಪಡೆಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.

‘2018ರ ಜೂನ್ 1ರಂದು ರಾಜ್ಯ ಚುನಾವಣಾ ಆಯೋಗವು ಹೊರಡಿಸಿದ ಆದೇಶದಂತೆ ಮತ ಪತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಭಾವಚಿತ್ರ ಮುದ್ರಿತ ಇರುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

‘ಮತದಾರ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಪೈಕಿ ಯಾವೊಬ್ಬ ಅಭ್ಯರ್ಥಿಯ ಪರವಾಗಿ ತನ್ನ ಮತವನ್ನು ಚಲಾಯಿಸಲು ಇಚ್ಚಿಸದಿದ್ದಲ್ಲಿ ನೋಟಾ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ನಗರಸಭೆ ಪೌರಾಯುಕ್ತ ರವೀಂದ್ರನಾಥ್ ಅಂಗಡಿ, ತಹಶೀಲ್ದಾರ್ ಗಂಗಾದೇವಿ ಇದ್ದರು.