1800 ಜನ ಕೊರೊನಾ ವಾರಿಯರ್ಸ್ ಗಳಿಗೆ ಆಹಾರ ಕಿಟ್ ನೀಡಿ ಕಡು ಬಡುವರು, ನಿರ್ಗತಿಕರಿಗೂ ನೆರವಾಗುತ್ತಿರುವ ಶಾಸಕ ದೇವಾನಂದ ಚವ್ಹಾಣ

ವಿಜಯಪುರ, ಜೂ.7-ಕೊರೊನಾ ಎರಡನೇ ಅಲೆ ಮತ್ತು ಲಾಕಡೌನ್ ನಿಂದಾಗಿ ರಾಜ್ಯವಷ್ಟೇ ಅಲ್ಲ ದೇಶಾದ್ಯಂತ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ, ಈ ಸೋಂಕು ತಡೆಯಲು ಕೊರೊನಾ ವಾರಿಯರ್ಸ್ ಗಳು ಹಗಲಿರುಳೂ ತಮ್ಮ ಜೀವ ಪಣಕ್ಕಿಟ್ಟು ಜನಸೇವೆ ಮಾಡುತ್ತಿದ್ದಾರೆ.
ಇನ್ನು ಲಾಕಡೌನ್‍ನಿಂದಾಗಿ ಕಡು ಬಡುವರು ಮತ್ತು ನಿರ್ಗತಿಕರು ದಿನದೂಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ 1800ಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್ ಗಳಿಗೆ ಆಹಾರದ ಕಿಟ್ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ನಾಗಠಾಣ ಮತಕ್ಷೇತ್ರ ವ್ಯಾಪ್ತಿಯಲ್ಲಿರುವ ಕಡು ಬಡವರು, ಅದರಲ್ಲೂ ನಿರ್ಗತಿಕರಿಗೂ ಆಹಾರ ಧಾನ್ಯಗಳ ಕಿಟ್ ಮತ್ತೀತರ ರೀತಿಯಲ್ಲಿ ಸಹಾಯ ಮಾಡುವ ಮೂಲಕ ಹಸಿದ ಹೊಟ್ಟೆಗಳಿಗೆ ಅನ್ನ ಹಾಕುತ್ತಿದ್ದಾರೆ.
ರಾಜ್ಯದಲ್ಲಿ ವಿಸ್ತೀರ್ಣದಲ್ಲಿ ಅತೀ ದೊಡ್ಡ ಮತಕ್ಷೇತ್ರಗಳಲ್ಲಿ ಒಂದಾಗಿರುವ ವಿಜಯಪುರ ಜಿಲ್ಲೆಯಲ್ಲಿ ನಾಗಠಾಣ ಮತಕ್ಷೇತ್ರ ಮೂರು ತಾಲೂಕುಗಳಲ್ಲಿ ಹಂಚಿ ಹೋಗಿದೆ. ರಾಜ್ಯದ ನಕ್ಷೆಯಲ್ಲಿ ಅಂಕುಡೊಂಕಾದ ಮತಕ್ಷೇತ್ರ ಎಂದೇ ಹೆಸರಾಗಿರುವ ಈ ಮತಕ್ಷೇತ್ರದಲ್ಲಿ ಅತೀ ಹೆಚ್ಚು ಲಂಬಾಣಿ ತಾಂಡಾಗಳೂ ಇವೆ. ಇಲ್ಲಿನ ಜನ ಉದ್ಯೋಗ ಅರಸಿ ಮಹಾರಾಷ್ಟ್ರ ಮತ್ತು ಗೋವಾ ಸೇರಿದಂತೆ ನಾನಾ ಕಡೆಗಳಿಗೆ ಗುಳೆ ಹೋಗುವುದ ಮಾಮೂಲು. ಅತೀ ಹೆಚ್ಚು ಬಡವರನ್ನು ಹೊಂದಿರುವ ತಮ್ಮ ಮತಕ್ಷೇತ್ರದಲ್ಲಿ ಕಳೆದ ಹಲವಾರು ದಿನಗಳಿಂದ ಹಸಿದ ಹೊಟ್ಟೆಗಳನ್ನು ತುಂಬಿಸುವ ಮೂಲಕ ಡಾ. ದೇವಾನಂದ ಚವ್ಹಾಣ ಅದಕ್ಕಾಗಿ ಗ್ರಾಮ ಪಂಚಾಯಿತಿಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ನಾಗಠಾಣ ಮತಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿರುವ ಬಡವರ ಪಟ್ಟಿ ತೆಗೆದುಕೊಂಡು ಸದ್ದಿಲ್ಲದೇ ಅವರಿಗೆ ದಿನಸಿ ಮುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ.
ಜೆಡಿಎಸ್ ಶಾಸಕರೆಂಬ ಕಾರಣಕ್ಕೆ ತಮ್ಮ ಮತಕ್ಷೇತ್ರದಲ್ಲೆ ಸರಕಾರದಿಂದ ಹೆಚ್ಚಿನ ಅನುದಾನವೂ ಬರುತ್ತಿಲ್ಲ ಎಂದು ನೋವು ತೋಡಿಕೊಲ್ಳುತ್ತಲೇ, ಶಾಸಕ ಡಾ. ದೇವಾನಂದ ಚವ್ಹಾಣ ತಮ್ಮ ಸ್ವಂತ ಖರ್ಚಿನಲ್ಲಿ ದಿನಸಿ ಕಿಟ್ ವಿತರಿಸುತ್ತಿದ್ದಾರೆ. ಕಳೆದ ವರ್ಷವೂ ಲಾಕ್ ಡೌನ್ ಸಮಯದಲ್ಲಿ ತಮ್ಮ ಕ್ಷೇತ್ರದ ಜನತೆಯ ಕಷ್ಟಗಳಿಗೆ ಸ್ಪಂದಿಸಿದ್ದ ಅವರು, ಈ ಬಾರಿಯೂ ಕೊರೊನಾ ವಾರಿಯರ್ಸ್, ಕಡು ಬಡವರು ಮತ್ತು ನಿರ್ಗತಿಕರಿಗೆ ನೆರವಾಗುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ.
ಕೇವಲ ಬಡವರು ಮಾತ್ರವಲ್ಲದೆ ಕೊವಿಡ್ ವಿರುದ್ಧ ಸಮರ ಸಾರಿರುವ ಕೊರೊನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಪೆÇಲಿಸರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹೀಗೆ ಹಲವಾರು ರೀತಿಯಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ಗಳಿಗೆ ಆಹಾರದ ಕಿಟ್ ಜೊತೆಗೆ ಮಾಸ್ಕ್ ಮತ್ತು ಸ್ಯಾನಿಟೈಸ್ ಕೂಡ ವಿತರಿಸುತ್ತಿದ್ದಾರೆ.
ಚಡಚಣದಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ಸ್ಯಾನಿಟೈಶೇಷನ್ ಮಾಡುತ್ತಿರುವ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಅವರು ಅಷ್ಟೇ ಅಲ್ಲದೇ ತಮ್ಮ ಮತಕ್ಷೇತ್ರದ ನಾನಾ ಗ್ರಾಮಗಳಲ್ಲಿ ಸ್ಯಾನಿಟೈಶೇಷನ್ ಕೂಡ ಮಾಡುತ್ತಿದ್ದಾರೆ. ಸ್ವತ ಟ್ರ್ಯಾಕ್ಟರ್ ಓಡಿಸಿ ಸ್ಯಾನಿಟೈಶೇಷನ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಒಟ್ಟಾರೆ ಕೊರೊನಾ ಸಂಕಷ್ಟ ಸಮಯದಲ್ಲಿ ಸದ್ದಿಲ್ಲದೆ ಹಸಿದವರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಶಾಸಕ ದೇವಾನಂದ ಚವ್ಹಾಣ ಬಡವರಿಗೆ ಅನ್ನದಾತರಾಗಿದ್ದಾರೆ.