18-59 ವರ್ಷ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಉಚಿತ:‌ ಅನುರಾಗ್ ಸಿಂಗ್ ಠಾಕೂರ್

ನವದೆಹಲಿ, ಜು.13- ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ 18 ರಿಂದ 59 ವರ್ಷ ವಯೋಮಾನದವರಿಗೆ ಉಚಿತವಾಗಿ ಬೂಸ್ಟರ್ ನೀಡಲು ಕೇಂದ್ರ ಸರಕಾರ ಮುಂದಾಗಿದೆ.

ಜುಲೈ 15ರಿಂದ ಮುಂದಿನ 75 ದಿನಗಳ ಕಾಲ ದೇಶಾದ್ಯಂತ ಉಚಿತವಾಗಿ ಬೂಸ್ಟರ್ ಡೋಸ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಉಚಿತವಾಗಿ ನೀಡುವ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

ದೇಶಾದ್ಯಂತ ಜುಲೈ 15ರಿಂದ ಉಚಿತವಾಗಿ ಹೆಚ್ಚುವರಿ ಲಸಿಕೆ ನೀಡಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಸಮುದಾಯ ಕೇಂದ್ರಗಳಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಎರಡು ಲಸಿಕೆ ಪಡೆದಿರುವ ಜನರು ಅದರಲ್ಲೂ 18ರಿಂದ 19 ವರ್ಷ ವಯೋಮಾನದ ಮಂದಿ ಹೆಚ್ಚುವರಿ ಡೋಸ್ ಲಸಿಕೆ ಪಡೆಯಬೇಕು ಮತ್ತು ಕೇಂದ್ರ ಸರ್ಕಾರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ

ಕೋವಿಡ್ ವಿರುದ್ದ ಹೋರಾಟಕ್ಕೆ ಬಲ

ದೇಶದಲ್ಲಿ 18ರಿಂದ 59 ವರ್ಷ ವಯೋಮಾನದವರಿಗೆ ಉಚಿತವಾಗಿ ಹೆಚ್ಚುವರಿ ಹೊಸ ಲಸಿಕೆ ನೀಡುವ ಕೇಂದ್ರ ಸರ್ಕಾರದ ಕ್ರಮ ಕೋವಿಡ್ ಸೋಂಕು ವಿರುದ್ದ‌ ಹೋರಾಡಲು ಮತ್ತಷ್ಟು ಬಲ ಬರಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ ಸುಖ್ ಮಾಂಡವೀಯ ಹೇಳಿದ್ದಾರೆ.

ಕೇಂದ್ರದ ಈ ನಿರ್ಧಾರ ಸೋಂಕು ವಿರುದ್ಧದ ಭಾರತದ ಹೋರಾಟವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಸುರಕ್ಷತೆಯ ಹೆಚ್ಚುವರಿ ಪದರವನ್ನು ಸೇರಿಸುತ್ತದೆ ಅರ್ಹರೆಲ್ಲರೂ ತಮ್ಮ ಮುನ್ನೆಚ್ಚರಿಕೆ ಡೋಸ್ ಅನ್ನು ಆದಷ್ಟು ಬೇಗ ಪಡೆಯಿರಿ ಎಂದು ಅವರು ಮನವಿ ಮಾಡಿದ್ದಾರೆ.