18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲು 2 ಕೋಟಿ ಡೋಸ್ ಪೂರೈಕೆಗೆ ಆದೇಶ

ಕಲಬುರಗಿ,ಮೇ.1: ರಾಜ್ಯದಾದ್ಯಂತ 18 ರಿಂದ 44 ವರ್ಷದೊಳಗಿನವರಿಗೆ ಸರ್ಕಾರಿ ಆಸ್ಪತ್ರೆಗಳ ಮೂಲಕ ಕೋವಿಡ್ ಲಸಿಕೆ ಉಚಿತವಾಗಿ ನೀಡಲು 2 ಕೋಟಿ ಡೋಸ್ ಪೂರೈಸುವಂತೆ ಸರಬರಾಜು ಕಂಪನಿಗಳಿಗೆ ಆದೇಶಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಹೇಳಿದರು.
ಕಲಬುರಗಿ ಜಿಲ್ಲೆಯ ಪ್ರವಾಸದಲ್ಲಿರುವ ಸಚಿವರು ಶನಿವಾರ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶದಾದ್ಯಂತ ಶನಿವಾರದಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಅದರಂತೆ ರಾಜ್ಯದಲ್ಲಿಯೂ ಇಂದಿನಿಂದ ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲು ಯೋಚಿಸಿಲಾಗಿತ್ತು. ಆದರೆ ಇದಕ್ಕಾಗಿ ಶುಕ್ರವಾರ ರಾಜ್ಯಕ್ಕೆ ಕೇವಲ 3 ಲಕ್ಷ ಡೋಸ್ ಮಾತ್ರ ಪೂರೈಕೆಯಾಗಿದ್ದರಿಂದ ಅದು ಕಷ್ಠಸಾಧ್ಯವಾಗಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಇಂದು ಸಾಂಕೇತಿಕವಾಗಿ ಮಾತ್ರ ಚಾಲನೆ ನೀಡಲಿದ್ದಾರೆ ಎಂದರು.
ಈಗಾಗಲೆ ಆದೇಶಿರುವಂತೆ 2 ಕೋಟಿ ಕೋವಿಡ್ ಲಸಿಕೆ ರಾಜ್ಯಕ್ಕೆ ಪೂರೈಕೆಯಾದ ಕೂಡಲೆ ರಾಜ್ಯದಾದ್ಯಂತವಿರುವ 6000 ಆರೋಗ್ಯ ಕೇಂದ್ರಗಳಿಗೆ ಸಮಾನವಾಗಿ ಹಂಚಿಕೆ ಮಾಡಿ ರಾಜ್ಯದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡಲಾಗುವುದು ಎಂದರು.
ಪ್ರಸ್ತುತ ರಾಜ್ಯದಲ್ಲಿ ಶೇ.80 ರಷ್ಟು ಜನರಿಗೆ ರೋಗದ ಲಕ್ಷಣವಿಲ್ಲದೇ ಕೋವಿಡ್ ಸೋಂಕು ದೃಢಪಟ್ಟಿದೆ. ಇನ್ನುಳಿದಂತೆ ಶೇ.10 ರಿಂದ 15 ಪ್ರಮಾಣದ ಜನರಿಗೆ ಕಡಿಮೆ ಪ್ರಮಾಣದ ಲಕ್ಷಣದ ಸೋಂಕು ಹಾಗೂ ಶೇ. 5 ರಿಂದ 8 ರಷ್ಟು ಜನರು ಅನಗತ್ಯ ಭಯಭೀತರಾಗಿ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದರು.
ಕೋವಿಡ್ ಸೋಂಕಿತರಿಗೆ ರೆಮಿಡಿಸಿವಿರ್ ಇಂಜೆಕ್ಷನ್ ತೆಗೆದುಕೊಂಡರೇ ಕಡಿಮೆಯಾಗುತ್ತದೆ ಎಂಬ ತಪ್ಪು ಗ್ರಹಿಕೆ ದೊಡ್ಡದಾಗಿ ಬೆಳೆದಿದೆ. ರೆಮಿಡಿಸಿವಿರ್ ಇಂಜೆಕ್ಷನ್ ಎಲ್ಲರಿಗೂ ಬೇಕಾಗುವುದಿಲ್ಲ ಎಂದು ತಜ್ಞ ವೈದ್ಯರುಗಳು ಈಗಾಗಲೆ ಸ್ಪಷ್ಟಪಡಿಸಿದ್ದಾರೆ. ರೋಗಿಯ ಆರೋಗ್ಯ ಸ್ಥಿತಿಗತಿ ನೋಡಿಕೊಂಡು ವೈದ್ಯರು ಇದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ವಿನಹ ಸೋಂಕಿತರು ಸ್ವಯಂ ನಿರ್ಧಾರ ಕೈಗೊಳ್ಳುವುದಲ್ಲ. ಹೀಗಾಗಿ ಸಾರ್ವಜನಿಕರು ತಪ್ಪು ಗ್ರಹಿಕೆ ಮಾಡಿಕೊಳ್ಳಬಾರದು ಎಂದು ಸಚಿವ ಕೆ.ಸುಧಾಕರ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಸಿ.ಟಿ.ಸ್ಕ್ಯಾನ್‍ಗೆ ಹೆಚ್ಚಿನ ಹಣ ಪಡೆದರೆ ಕ್ರಮ: ಸಿ.ಟಿ. ಸ್ಕ್ಯಾನ್ ಮಾಡಲು ಖಾಸಗಿ ಸ್ಕ್ಯಾನಿಂಗ್ ಲ್ಯಾಬ್, ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಂದ ಹೆಚ್ಚಿನ ದುಡ್ಡು ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಜನಸಾಮಾನ್ಯರಿಗೆ ಕೈಗೆಟ್ಟುಕುವ ದರದಲ್ಲಿ ಸಿ.ಟಿ ಸ್ಕ್ಯಾನ್ ಮಾಡಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದ ಆಸ್ಪತ್ರೆ, ಲ್ಯಾಬ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಕೆ.ಸುಧಾಕರ ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ, ವಿಧಾನ ಪರಿಷತ್ತಿನ ಶಾಸಕರಾದ ಬಿ.ಜಿ. ಪಾಟೀಲ್, ಶಶಿಲ್ ಜಿ. ನಮೋಶಿ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಸದಸ್ಯ ಶಿವರಾಜ ಪಾಟೀಲ ರದ್ದೆವಾಡಗಿ ಮತ್ತಿತರರು ಇದ್ದರು.