18 ವರ್ಷ ಮೇಲ್ಪಟ್ಟವರಿಗೆ ಇಂದಿನಿಂದಲೇ ಲಸಿಕೆ

ಬೆಂಗಳೂರು,ಮೇ ೧- ೧೮ ವರ್ಷ ಮೇಲ್ಪಟ್ಟವರಿಗೆ ಇಂದಿನಿಂದಲೇ ಲಸಿಕೆ ನೀಡಲಾಗುವುದು ಎಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ೧೮ ವರ್ಷ ಮೇಲ್ಪಟ್ಟ ೩.೫ ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.
ಶಿವಾಜಿನಗರದ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿಂದು ಸಾಂಕೇತಿಕವಾಗಿ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ ೪ ಲಕ್ಷ ಡೋಸ್ ಲಸಿಕೆ ದಾಸ್ತಾನು ಇದೆ. ಈ ಲಸಿಕೆಯನ್ನು ೧೯ ವರ್ಷ ಮೇಲ್ಪಟ್ಟವರಿಗೆ ನೀಡುತ್ತೇವೆ. ೪೫ ವರ್ಷ ಮೇಲ್ಪಟ್ಟವರಿಗೆ ಲಸಿಕೆ ವ್ಯವಸ್ಥೆಯೇ ಬೇರೆಯೇ ಇದೆ. ೪೫ ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಿಕೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದರು.
ಇನ್ನು ೨-೩ ದಿನಗಳಲ್ಲಿ ರಾಜ್ಯಕ್ಕೆ ಮತ್ತಷ್ಟು ಲಸಿಕೆ ಬರಲಿದೆ. ಹಾಗಾಗಿ, ಲಸಿಕೆ ನೀಡಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಹೇಳಿದರು.
ರಾಜ್ಯಸರ್ಕಾರ ಈಗಾಗಲೇ ೨ ಕೋಟಿ ಡೋಸ್ ಲಸಿಕೆ ಖರೀದಿಗೆ ಆದೇಶ ನೀಡಿದೆ. ಎಲ್ಲರಿಗೂ ಉಚಿತವಾಗಿಯೇ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳು ಲಸಿಕಾ ದರ ಮತ್ತು ಸೇವಾ ಶುಲ್ಕವಾಗಿ ೧೦೦ ರೂ.ಗಳನ್ನು ಮಾತ್ರ ಪಡಯಬೇಕು. ಹೆಚ್ಚು ಪಡೆದರೆ ತೀವ್ರ ಕ್ರಮ ಕೈಗೊಳ್ಳುತ್ತೇವೆ ಎಂದರು.
ಲಸಿಕೆ ಲಭ್ಯತೆ ಆಧಾರದ ಮೇಲೆ ಹಂತ ಹಂತವಾಗಿ ಲಸಿಕಾ ಅಭಿಯಾನ ಮುಂದುವರೆಯುತ್ತದೆ. ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು ಎಂಬ ಪ್ರಧಾನಿಗಳ ನಿರ್ಧಾರ ಸಮಯೋಚಿತವಾಗಿದೆ. ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಎಂದರು.
ಸ್ವದೇಶಿಯಾಗಿ ೨ ಲಸಿಕೆ ಲಭ್ಯವಿದೆ. ವಿದೇಶದಿಂದಲೂ ಲಸಿಕೆಯನ್ನು ಪ್ರಧಾನಿ ಮೋದಿ ತರಿಸುತ್ತಿದ್ದಾರೆ. ಲಸಿಕಾ ಅಭಿಯಾನ ಯಶಸ್ವಿ ಮಾಡುವ ಮೂಲಕ ದೇಶವನ್ನು ಕೊರೊನಾ ಮುಕ್ತ ಮಾಡಬೇಕಾಗಿದೆ ಎಂದರು. ರಾಜ್ಯದಲ್ಲಿ ಇದುವರೆಗೂ ೯೬.೫ ಲಕ್ಷ ಡೋಸ್ ಲಸಿಕೆ ನೀಡಲಾಗಿದೆ ಎಂದೂ ಅವರು ಹೇಳಿದರು.
ಕೊರೊನಾ ಸಂಕಷ್ಟದ ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಔಷಧಿ, ಆಮ್ಲಜನಕ ಕೊರತೆಯ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಹಾಗೂ ಸೋಂಕಿತರಿಂದ ಯದ್ವಾತದ್ವಾ ಶುಲ್ಕ ವಸೂಲಿ ಮಾಡುವವರ ವಿರುದ್ಧವೂ ಕ್ರಮಕೈಗೊಳ್ಳುತ್ತೇವೆ. ಸೋಂಕಿತರನ್ನು ಶೋಷಣೆ ಮಾಡುವ ಅಧಿಕಾರಿಗಳನ್ನು ಡಿಸ್‌ಮಿಸ್ ಮಾಡಲು ಹಿಂದೆ-ಮುಂದೆ ನೋಡುವುದಿಲ್ಲ ಎಂದರು.
ಕೊರೊನಾ ವಿರುದ್ಧದ ಹೋರಾಟದಲ್ಲಿ ಜನರ ಸಹಕಾರ ಅತೀ ಅವಶ್ಯ, ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಅವರು ಮನವಿ ಮಾಡಿದರು.