18 ದಿನದಲ್ಲಿ 60 ಯುವಕರ ಸಾವು

ಬೆಂಗಳೂರು, ಏ.೨೦-ಕರ್ನಾಟಕ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಆರಂಭದಲ್ಲಿಯೇ ಸಾವಿನ ಪ್ರಮಾಣ ದ್ವಿ ಗುಣಗೊಳ್ಳುತ್ತಿದ್ದು, ಬರೀ ಹದಿನೇಂಟು ದಿನದೊಳಗೆ ರಾಜ್ಯದೆಲ್ಲೆಡೆ ೬೦ ಯುವಕ-ಯುವತಿಯರು ಈ ಸೋಂಕಿಗೆ ಬಲಿಯಾಗಿರುವುದು ಆರೋಗ್ಯ ತಜ್ಞರಲ್ಲಿ ದಿಗ್ಬ್ರಮೆ ಮೂಡಿಸಿದೆ.
ಸಾವಿನ ಪ್ರಕರಣ ಸಂಬಂಧ ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ “ಸಂಜೆವಾಣಿ” ಪತ್ರಿಕೆಗೆ ಲಭಿಸಿದ್ದು, ಕಳೆದ ಹದಿನೇಂಟು ದಿನಗಳಿಂದ ಅಂದರೆ ಏಪ್ರಿಲ್ ೨ರಿಂದ ೧೯ರವರೆಗೂ ಕೊರೋನಾ ಸೋಂಕಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯವಾಪಿ ಒಟ್ಟು ೯೧೪ ಮಂದಿ ಸಾವನ್ನಪ್ಪಿದರೆ, ಇದರಲ್ಲಿ ೬೦ ಮಂದಿ ಯುವಕರೇ ಆಗಿದ್ದಾರೆ.
೪೦ ವರ್ಷದೊಳಗಿನ ಒಟ್ಟು ೬೦ ಮಂದಿ ಯುವ ಪೀಳಿಗೆ ಮಹಾಮಾರಿ ಕೋವಿಡ್‌ಗೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಪೈಕಿ ೨೫ ಮೃತರು ಯುವತಿಯರೇ ಆಗಿರುವುದು ಹೃದಯ ಕಲಕುವಂತೆ ಮಾಡಿದೆ. ಇನ್ನು,ಬಹುತೇಕ ಮೃತರಲ್ಲಿ ಕೋವಿಡ್ ಹೊರತು ಪಡಿಸಿ, ಮಧುಮೇಹ, ಬಿಪಿ ಸೇರಿದಂತೆ ಇನ್ನಿತರೆ ರೋಗಗಳು ಇಲ್ಲದಿರುವುದು ಗಮನಾರ್ಹ ಸಂಗತಿ.
ಆತಂಕ ಹೆಚ್ಚಿಸಿದೆ: ಯುವ ಸಮುದಾಯದ ೬೦ ಸಾವನ್ನಪ್ಪಿರುವುದಕ್ಕೆ ಆರೋಗ್ಯ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಯಾವುದೇ ಇತರೆ ರೋಗ ಲಕ್ಷಣ ಇಲ್ಲದಿದ್ದರೂ, ಜ್ವರ, ಉಸಿರಾಟ ಸಮಸ್ಯೆಯಿಂದ ತಮ್ಮ ಪ್ರಾಣ ಕಳೆದು ಕೊಳ್ಳುವಂತೆ ಆಗಿರುವುದು ಭೀತಿ ಹುಟ್ಟಿಸಿದೆ.
ಯಾವ, ಜಿಲ್ಲೆ ಎಷ್ಟು?: ಸಾವನ್ನಪ್ಪಿದ ೬೦ ಯುವಕರ ಪೈಕಿ ರಾಜಧಾನಿ ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಮೃತರು ಪತ್ತೆಯಾಗಿದ್ದು, ಒಟ್ಟು ೩೪ ಅಸುನೀಗಿದ್ದಾರೆ. ಅದೇ ರೀತಿಯಲ್ಲಿ ಮೈಸೂರಿನಲ್ಲಿ ೪, ಬೀದರ್ ಮತ್ತು ಹಾಸನಲ್ಲಿ ತಲಾ ಮೂವರು, ಕೋಲಾರ, ತುಮಕೂರು, ವಿಜಯಪುರ ಜಿಲ್ಲೆಗಳಲ್ಲಿ ತಲಾ ಎರಡು ಸೇರಿದಂತೆ ಇನ್ನಿತರೆ ಕೆಲ ಜಿಲ್ಲೆಗಳಿ ತಲಾ ಒಬ್ಬರು ಸೇರಿದಂತೆ ಒಟ್ಟಾರೆ ೪೦ ವರ್ಷದೊಳಗಿನ ೬೦ ಮಂದಿ ಸಾವನ್ನಪ್ಪಿದ್ದಾರೆ.
ಜ್ವರ, ಉಸಿರಾಟ ತೊಂದರೆ: ಮೃತಪಟ್ಟ ಎಲ್ಲರಲ್ಲೂ ಕೋವಿಡ್ ಸೋಂಕಿನ ಗುಣಲಕ್ಷಣಗಳು ಪತ್ತೆಯಾಗಿದ್ದು, ಜ್ವರ, ಉಸಿರಾಟ ತೊಂದರೆ ತೀವ್ರಗೊಂಡ ಕಾರಣದಿಂದಲೇ ಪ್ರಾಣಪಕ್ಷಿಯೇ ಹಾರಿಹೋಗಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು ಸೇರಿದಂತೆ ಇನ್ನಿತರೆ ಜಿಲ್ಲೆಗಳಲ್ಲೂ ವಾಸ್ತವದಲ್ಲಿ ವೆಂಟಿಲೇಟರ್‌ಗಳ ಸಂಖ್ಯೆ ಹತ್ತಾರು ಸಹ ಇಲ್ಲ. ಅವುಗಳಲ್ಲಿಯೂ ಸೇವೆಗೆ ಸಿದ್ಧವಾಗಿರುವ ಸಂಖ್ಯೆ ಇನ್ನು ಕಡಿಮೆ ಇದೆ. ಹೀಗಾಗಿ, ವೆಂಟಿಲೇಟರ್, ಆಕ್ಸಿಜನ್ ಇಲ್ಲದೇ ಇರುವುದರಿಂದ ಕೋವಿಡ್-೧೯ಕ್ಕೆ ತುತ್ತಾಗುವ ರೋಗಿಗಳು ಆಸ್ಪತ್ರೆಗೆ ದಾಖಲಾದಾಗ ಉಸಿರಾಟದ ಸಮಸ್ಯೆಯಿಂದ ಬಳಲಿ ಮರಣ ಹೊಂದುತ್ತಿದ್ದಾರೆ.
ಅಷ್ಟಕ್ಕೂ ಇದುವರೆಗೂ ಮೃತಪಟ್ಟವರು ಅಂಥ ಗಂಭೀರ ಕಾಯಿಲೆಯಿಂದ ಬಳಲುತ್ತಿರಲಿಲ್ಲ. ಒಂದಿಬ್ಬರು ನಾನಾ ಆರೋಗ್ಯದ ಸಮಸ್ಯೆಯಿಂದ ಬಳಲಿದರೂ ಉಳಿದವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದವರು. ಆದರೆ, ಅವರೆಲ್ಲರಿಗೂ ವೆಂಟಿಲೇಟರ್ ಸಿಕ್ಕಿದ್ದರೆ ಖಂಡಿತವಾಗಿಯೂ ಬದುಕುತ್ತಿದ್ದರು ಎಂದು ಹೆಸರು ಹೇಳದ ವೈದ್ಯರೊಬ್ಬರು ಸಂಜೆವಾಣಿಗೆ ತಿಳಿಸಿದರು.

ಸಣ್ಣ ವಯಸ್ಸಿನಲ್ಲಿಯೇ ಕಣ್ಮುಚ್ಚಿದರು..!
ಹಾಸನದಲ್ಲಿ ಬರೀ ಮೂರು ತಿಂಗಳ ಮಗುವೊಂದು ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪಿದರೆ, ರಾಜಧಾನಿ ಬೆಂಗಳೂರಿನಲ್ಲೂ ಹದಿಮೂರು ವರ್ಷದ ಬಾಲಕ ತೀವ್ರ ಜ್ವರ, ಶೀತದಿಂದ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಪ್ರಕರಣಗಳು ಕೊರೊನಾ ಸಾವುಗಳೆಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

ಯುವಕರೇ ಎಚ್ಚರ, ಕಾದಿದೆ ಅಪತ್ತು..!
ರೋಗ ನಿರೋಧಕ ಶಕ್ತಿ ಹೊಂದಿರುವ ಯುವಕರೇ ಕೊರೊನಾಗೆ ಬಲಿಯಾಗಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಹಾಗಾಗಿಯೇ, ಕೇಂದ್ರ ಸರ್ಕಾರವು ಮೇ ೧ರಿಂದ ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಘೋಷಣೆ ಮಾಡಿದೆ. ಇನ್ನು, ಯುವಕರು ನಿರ್ಲಕ್ಷ್ಯ ಭಾವನೆ ತಾಳದೆ, ಎಚ್ಚರವಹಿಸುವುದು ಅತ್ಯಗತ್ಯ.