17 ರಿಂದ ಬೀದರ್‍ನಲ್ಲಿ ರಾಷ್ಟ್ರಮಟ್ಟದ ಫುಟ್‍ಬಾಲ್ ಟೂರ್ನಮೆಂಟ್

ಬೀದರ್: ನ.10:ಖ್ಯಾತ ಫುಟ್‍ಬಾಲ್ ಆಟಗಾರರಾದ ನಯೀಮ್, ಜಾವೇದ್ ಹಾಗೂ ಅರುಣ್ ಪಾಲ್ ಅವರ ಸ್ಮರಣಾರ್ಥವಾಗಿ ನಗರದ ನೆಹರೂ ಕ್ರೀಡಾಂಗಣದಲ್ಲಿ ನವೆಂಬರ್ 17 ರಿಂದ 20 ರ ವರೆಗೆ ರಾಷ್ಟ್ರಮಟ್ಟದ ಫುಟ್‍ಬಾಲ್ ಟೂರ್ನಮೆಂಟ್ ಆಯೋಜಿಸಲಾಗಿದೆ.

ನವೆಂಬರ್ 17 ರಂದು ಬೆಳಿಗ್ಗೆ 11ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಲಬುರಗಿಯ ಪೊಲೀಸ್ ತರಬೇತಿ ಕೇಂದ್ರದ ಪ್ರಾಚಾರ್ಯ ಐಡಾ ಮಾರ್ಟಿನ್, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು ಪಾಲ್ಗೊಳ್ಳಲಿದ್ದಾರೆ ಎಂದು ಟೂರ್ನಮೆಂಟ್ ಆಯೋಜಕರಾದ ಕಾಂಗ್ರೆಸ್ ಮುಖಂಡ ಅಬ್ದುಲ್ ಮನ್ನಾನ್ ಸೇಠ್ ತಿಳಿಸಿದ್ದಾರೆ.

ಕೇರಳ, ಗೋವಾ, ತೆಲಂಗಾಣದ ಹೈದರಾಬಾದ್, ಮಹಾರಾಷ್ಟ್ರದ ಮುಂಬೈ, ಔರಂಗಾಬಾದ್, ಪರಭಣಿ, ರಾಜ್ಯದ ಬೆಂಗಳೂರು, ಬೀದರ್ ಸೇರಿದಂತೆ ಒಟ್ಟು 18 ತಂಡಗಳು ಟೂರ್ನಮೆಂಟ್‍ನಲ್ಲಿ ಭಾಗವಹಿಸಲಿವೆ. ಬೀದರ್ ಜಿಲ್ಲೆಯ ನಾಲ್ಕು ತಂಡಗಳು ಭಾಗವಹಿಸಲಿರುವುದು ವಿಶೇಷವಾಗಿದೆ ಎಂದು ಹೇಳಿದ್ದಾರೆ.

ನಯೀಮ್, ಜಾವೇದ್ ಮತ್ತು ಅರುಣ್ ಪಾಲ್ ಬೀದರ್‍ನ ಪ್ರಸಿದ್ಧ ಫುಟ್‍ಬಾಲ್ ಆಟಗಾರರಾಗಿದ್ದರು. ಅವರ ಸ್ಮರಣಾರ್ಥವಾಗಿ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿದೆ. ವಿಜೇತ ತಂಡಕ್ಕೆ ರೂ. 1,01,111, ರನ್ನರ್ ಅಪ್ ತಂಡಕ್ಕೆ ರೂ. 50,555 ಹಾಗೂ ತೃತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. 25,555 ಹಾಗೂ ಟ್ರೋಫಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕ್ರೀಡಾಪಟುಗಳ ವಸತಿ, ಆಹಾರ ಸೇರಿದಂತೆ ಟೂರ್ನಮೆಂಟ್‍ಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ಫುಟ್‍ಬಾಲ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಟೂರ್ನಮೆಂಟ್‍ನಲ್ಲಿ ಪಾಲ್ಗೊಳ್ಳಬೇಕು. ಪಂದ್ಯಗಳನ್ನು ವೀಕ್ಷಿಸಿ, ಫುಟ್‍ಬಾಲ್ ಆಟಗಾರರನ್ನು ಹುರಿದುಂಬಿಸಬೇಕು ಎಂದು ತಿಳಿಸಿದ್ದಾರೆ.