154ನೇ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ: ಅ.03:- ರಾಷ್ಟ್ರ ಪಿತಾ ಮಹಾತ್ಮ ಗಾಂಧಿಯವರ ಜೀವನ ಮತ್ತು ಸಾಧನೆ ಜಗತ್ತಿಗೆ ಮಾದರಿ ಮತ್ತು ಮಾರ್ಗದರ್ಶಕ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಆಡಳಿತ ಸೌಧದ ಆವರಣದಲ್ಲಿ ತಾಲೂಕು ನಾಡಹಬ್ಬಗಳ ಸಮಿತಿಯ ವತಿಯಿಂದ ನಡೆದ ಮಹಾತ್ಮ ಗಾಂಧಿಯವರ 154ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನ ಜೀವನ ನನ್ನ ಸಂದೇಶ ಎಂಬ ಅವರ ಘೋಷ ವಾಕ್ಯಗಳು ಸಾಧಕರಿಗೆ ಸ್ಪೂರ್ತಿದಾಯಕ ಎಂದರು.
ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಬರಲು ಪ್ರಮುಖ ಕಾರಣರಾಗಿ ಆ ಮೂಲಕ ಇಂತಹ ಮಾರ್ಗದಿಂದ ಸರ್ವವನ್ನು ಸಾಧಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಅವರು ಅಜರಾಮರ ಎಂದು ಬಣ್ಣಿಸಿದರು.
ಮಹಾತ್ಮ ಗಾಂಧಿಯವರ ವಿಚಾರಧಾರೆಗಳು ಜಗತ್ತನ್ನೆ ಪ್ರಭಾವಿಸಿದ್ದು ತಮ್ಮ ಜೀವಿತಾವಧಿಯ ಕೊನೆಯವರೆಗೆ ಅಹಿಂಸೆ ಮತ್ತು ಸತ್ಯವನ್ನು ಪ್ರತಿಪಾದಿಸಿದ ರಾಷ್ಠ್ರಪಿತ ತಮ್ಮ ತತ್ವ ಹಾಗೂ ಸಿದ್ದಾಂತಗಳಿಗೆ ಕಟಿಬದ್ದರಾಗಿದ್ದ ಮಹಾನ್ ಪುರುಷರೆಂದು ಕೊಂಡಾಡಿದರು.
ಗಾಂಧಿಜೀಯವರ ವಿಚಾರ ಧಾರೆಗಳು ಮತ್ತು ಅವರ ಅಹಿಂಸಾತ್ಮಕ ಹೋರಾಟ ವೇದಿಕೆ ಕಾರ್ಯಕ್ರಮಗಳಿಗೆ ಮೀಸಲಾಗಿದ್ದು ಇದನ್ನು ಬಿಟ್ಟು ಮುಂದೆ ನಾವೆಲ್ಲರು ಸದಾ ಕಾಲ ಅವರನ್ನು ನೆನೆದು ಮಹಾತ್ಮರು ಹಾಕಿಕೊಟ್ಟ ದಾರಿಯಲ್ಲಿ ಸಾಗಿ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕೆಂದು ಕರೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಕೆ.ಚಿನ್ನಸ್ವಾಮಿ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್, ಜಿ.ಪಂ.ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ಪುರಸಭೆ ಸದಸ್ಯ ತೋಂಟದಾರ್ಯ, ಶಂಕರ್, ಮಾಜಿ ಸದಸ್ಯ ಕೆ.ವಿನಯ್, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾ.ಪಂ.ಇಒ ಜಿ.ಕೆ.ಹರೀಶ್, ಪುರಸಭೆ ಮುಖ್ಯಾಧಿಕಾರಿ ಜಯಣ್ಣ, ಬಿಇಒ ಆರ್, ಕೃಷ್ಣಪ್ಪ, ಸೆಸ್ಕಾಂ ಎಇಇ ಅರ್ಕೇಶ್ವರಮೂರ್ತಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಅಶೋಕ್ ಮತ್ತಿತರರು ಇದ್ದರು.